ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಮದುವೆಯ ಕನಸು ಕಂಡಿದ್ದ ಯುವತಿಯೊಬ್ಬಳು, ಭಾವಿ ಪತಿಯ ವರ್ತನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಎಂ.ಎಸ್ಸಿ ಪದವೀಧರೆ ರೆಹಾನಾ ಅವರಿಗೆ ಶಹಜಹಾನ್ ಎಂಬ ಯುವಕನೊಂದಿಗೆ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಮದುವೆ ಸಿದ್ಧತೆಗಳು ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಿಶ್ಚಿತಾರ್ಥದ ಬಳಿಕ ಶಹಜಹಾನ್, ರೆಹಾನಾ ಜೊತೆ ಫೋನ್‌ನಲ್ಲಿ ಮಾತನಾಡುವ ವೇಳೆ ಅವಳಿಗೆ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದಾನೆ ಎನ್ನಲಾಗಿದೆ. “ನನಗೆ ನೀನು ಇಷ್ಟವಿಲ್ಲ”, “ನಿನ್ನನ್ನು ನೋಡಿದರೆ ಯಾವುದೇ ಭಾವನೆ ಬರೋದಿಲ್ಲ”, “ನನಗೆ ಈಗಾಗಲೇ ನಾಲ್ಕು ಜನ ಗರ್ಲ್‌ಫ್ರೆಂಡ್ಸ್ ಇದ್ದಾರೆ” ಎಂಬಂತಹ ಮಾತುಗಳನ್ನು ಹೇಳಿ ಅವಳನ್ನು ಅವಮಾನಿಸುತ್ತಿದ್ದನು ಎಂದು ಹೇಳಲಾಗಿದೆ. ಆರಂಭದಲ್ಲಿ ಇದನ್ನು ತಮಾಷೆ ಎಂದುಕೊಂಡ ರೆಹಾನಾ, ನಂತರ ಆತನ ಮಾತುಗಳಿಂದ ತೀವ್ರವಾಗಿ ನೋವಿಗೆ ಒಳಗಾಗಿದ್ದಾಳೆ.

ಈ ಮಾನಸಿಕ ಒತ್ತಡವನ್ನು ತಡೆಯಲಾರದೆ, ಏಪ್ರಿಲ್ 20ರಂದು ರೆಹಾನಾ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಮುನ್ನ 12 ಪುಟಗಳ ಡೆತ್ ನೋಟ್ ಬರೆದು ತನ್ನ ಅನುಭವಿಸಿದ ನೋವನ್ನು ವಿವರವಾಗಿ ದಾಖಲಿಸಿದ್ದಾಳೆ.

ಈ ಘಟನೆ ಸಮಾಜದ ಮುಂದೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಮದುವೆ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ನಿಶ್ಚಿತಾರ್ಥಕ್ಕೂ ಮುನ್ನವೇ ನಿರ್ಧಾರ ತಿಳಿಸಬಹುದಿತ್ತು. ಆದರೆ ಒಬ್ಬ ಯುವತಿಯ ಭಾವನೆಗಳೊಂದಿಗೆ ಆಟವಾಡಿ, ಅವಳನ್ನು ಮಾನಸಿಕವಾಗಿ ಕುಗ್ಗಿಸುವಂತಹ ವರ್ತನೆಗೆ ವಿರೋಧ ವ್ಯಕ್ತವಾಗುತ್ತಿದೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

Related News

error: Content is protected !!