ಉತ್ತರ ಕನ್ನಡ : ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೇಕೋಡಿ ಸಮುದ್ರ ತೀರದಲ್ಲಿ ಭಾನುವಾರ ಭೀಕರ ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ಎಂಟು ಮಂದಿ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಇನ್ನೂ ಮೂವರು ನಾಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.
ಈ ಭೀಕರ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಎಂಟೂ ಜನರೂ ಭಟ್ಕಳ ತಾಲೂಕಿನ ಸಾರದಹೊಳೆಯ ಹೆರಿಹಿತ್ಲು ಮೂಲದ ಒಂದೇ ಕುಟುಂಬದವರಾಗಿದ್ದಾರೆ. ರಜಾದಿನದ ಹಿನ್ನೆಲೆಯಲ್ಲಿ ಒಟ್ಟು 13 ಮಂದಿ ಸೇರಿ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕೆಲವರು ಚಿಪ್ಪು ಸಂಗ್ರಹಿಸಲು ಸಮುದ್ರಕ್ಕೆ ಇಳಿದಾಗ, ಅಕಸ್ಮಾತ್ ಏರಿದ ದೈತ್ಯ ಅಲೆಗಳ ಸೆಳೆತಕ್ಕೆ ಸಿಲುಕಿ ಹಲವರು ನೀರಿನಲ್ಲಿ ಕಾಣೆಯಾಗಿದ್ದಾರೆ.
ಸ್ಥಳೀಯರ ಪ್ರಕಾರ, ನೀರಿಗೆ ಇಳಿದಿದ್ದವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ಸಾಗುತ್ತಿದ್ದರು. ಆದರೆ ಹಿಂದಿನ ದಿನ ಸುರಿದ ಭಾರಿ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಹರಿವು ತೀವ್ರವಾಗಿತ್ತು. ಇದೇ ವೇಳೆ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದರಿಂದ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ. ನೀರಿನ ರಭಸಕ್ಕೆ ಸಿಲುಕಿ ಸಮತೋಲನ ಕಳೆದುಕೊಂಡ ಕೆಲವರು ಆಳಕ್ಕೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಮುಳುಗುತ್ತಿದ್ದವರನ್ನು ರಕ್ಷಿಸಲು ಹೋದ ಕುಟುಂಬದ ಉಳಿದವರೂ ನೀರಿನ ಸೆಳೆತಕ್ಕೆ ಸಿಲುಕಿದ್ದರಿಂದ ದುರಂತದ ತೀವ್ರತೆ ಹೆಚ್ಚಾಗಿದೆ ಎನ್ನಲಾಗಿದೆ.
ಅವಘಡದಲ್ಲಿ ಮೃತಪಟ್ಟ ಎಂಟು ಮಂದಿಯೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ನಾಪತ್ತೆಯಾದ ಮೂವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮೃತದೇಹಗಳಲ್ಲಿ ಆರು ಮಂದಿಯ ಶವಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇನ್ನೆರಡು ಮೃತದೇಹಗಳನ್ನು ಆರ್.ಎನ್.ಎಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ನಾಗರತ್ನಾ ಮತ್ತು ಮಹಾದೇವಿ ಎಂಬ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೇ ಮನೆಯ ಎಂಟು ಜೀವಗಳು ಬಲಿಯಾದ ವಿಷಯ ತಿಳಿಯುತ್ತಿದ್ದಂತೆ ಪಡುಶಿರಾಲಿ, ಶಾರದಾಹೊಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮನೆಗೆ ಮರಳಬೇಕಿದ್ದ ಕುಟುಂಬ ಸದಸ್ಯರು ಶವವಾಗಿ ಬಂದಿರುವ ದೃಶ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರಿಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
