ಬೆಂಗಳೂರು: ಪ್ರೀತಿಸಿ ಮನೆಯವರ ಒಪ್ಪಿಗೆಯೊಂದಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಸುಮಂತ್ ಜೈನ್ (32) ಹಾಗೂ ಹುಬ್ಬಳ್ಳಿ ಮೂಲದ ಪದ್ಮಾವತಿ (30) ಮೃತ ದಂಪತಿ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಂತ್ ನಂದಿನಿ ಲೇಔಟ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಪದ್ಮಾವತಿ ವೈಟ್‌ಫೀಲ್ಡ್‌ನ ಕ್ಯಾಪ್‌ಜೆಮಿನಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದ ಈ ದಂಪತಿ ಲಗ್ಗೆರೆ ಸಮೀಪದ ರಾಜೇಶ್ವರಿನಗರದ ಬ್ಯಾಂಕ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗುರುವಾರ ರಾತ್ರಿ ದಂಪತಿ ನಡುವೆ ಜಗಳ ಆರಂಭವಾಗಿದ್ದು, ಶುಕ್ರವಾರ ಬೆಳಗ್ಗೆಯೂ ಜಗಳ ಮುಂದುವರಿದಿತ್ತು ಎನ್ನಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜಗಳ ವಿಕೋಪಕ್ಕೆ ತೆರಳಿದ ಸಂದರ್ಭದಲ್ಲಿ ಸುಮಂತ್ ತನ್ನ ಪತ್ನಿ ಪದ್ಮಾವತಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಬಳಿಕ ಆತ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ದಂಪತಿಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ತಾಯಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದ ಪದ್ಮಾವತಿ

ದಂಪತಿ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಪದ್ಮಾವತಿ ತನ್ನ ತಾಯಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದಳು ಎನ್ನಲಾಗಿದೆ. “ಅಮ್ಮ, ನಾನು ಸಾಯುತ್ತೇನೆ. ಮದುವೆ ವೇಳೆ ನನಗೆ ನೀಡಿದ್ದ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋಗಿ” ಎಂದು ಆಕೆ ಸಂದೇಶ ಕಳುಹಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

“ನಾನು ಸಾಯುತ್ತಿದ್ದೇನೆ, ಪಿಎಫ್ ಹಣ ತೆಗೆದುಕೊಂಡು ಹೋಗಿ”

ಇದೇ ವೇಳೆ, ಆತ್ಮಹತ್ಯೆಗೂ ಮುನ್ನ ಸುಮಂತ್ ಜೈನ್ ಕೂಡ ತನ್ನ ತಾಯಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. “ನಾನು ಸಾಯುತ್ತಿದ್ದೇನೆ. ಈ ಮನೆ ನನ್ನದು ಎಂದು ಹೇಳಿಕೊಂಡು ಹೆಂಡತಿ ಜಗಳ ಮಾಡುತ್ತಿದ್ದಾಳೆ. ನನ್ನ ಪಿಎಫ್ ಹಣ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗಿ” ಎಂದು ಆತ ಸಂದೇಶ ಕಳುಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ರಾಜಗೋಪಾಲನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ದಂಪತಿಯ ಮೊಬೈಲ್ ಫೋನ್‌ಗಳು, ಡೈರಿ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ದಂಪತಿಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಸಾವಿನ ಹಿಂದಿನ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related News

error: Content is protected !!