ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಮದುವೆಗೆ ಇನ್ನೂ ಕೇವಲ 24 ಗಂಟೆಗಳಷ್ಟೇ ಬಾಕಿ ಇರುವಾಗ, ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ರಕ್ಷಿತಾ ಎಂಬ ಯುವತಿ ತನ್ನ ತಂದೆ ಶಿವಣ್ಣ ಹಾಗೂ ತಾಯಿಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಶಿವಣ್ಣ ಟ್ರ್ಯಾಕ್ಟರ್ ಚಾಲಕರಾಗಿದ್ದು, ಮಗಳನ್ನು ಪ್ರೀತಿಯಿಂದ ಸಾಕಿ ಬೆಳೆಸಿದ್ದರು. ಈ ಮಧ್ಯೆ ಟ್ರ್ಯಾಕ್ಟರ್ ಚಾಲಕರಾಗಿದ್ದ ಉಲ್ಲಾಸ್ ಗೌಡ ಎಂಬಾತ ಶಿವಣ್ಣನ ಪರಿಚಯ ಮಾಡಿಕೊಂಡು ಮನೆಗೆ ಆಗಾಗ್ಗೆ ಬರುತ್ತಿದ್ದ. ಇದೇ ವೇಳೆ ರಕ್ಷಿತಾಳ ಮೇಲೆ ಏಕಪಕ್ಷೀಯ ಪ್ರೀತಿ ಬೆಳೆಸಿಕೊಂಡಿದ್ದಾನೆ ಎನ್ನಲಾಗಿದೆ.

ಉಲ್ಲಾಸ್ ಗೌಡ ತನ್ನ ಪ್ರೀತಿಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದರೂ, ಶಿವಣ್ಣ ಈತನನ್ನು ಕುಟುಂಬದಿಂದ ದೂರ ಇಟ್ಟಿದ್ದರು. ಆದರೆ ಇದರಿಂದ ಆತನ ಕಿರುಕುಳ ಕಡಿಮೆಯಾಗದೇ, ಹೆಚ್ಚಾಗುತ್ತಲೇ ಹೋಯಿತು ಎಂದು ಹೇಳಲಾಗಿದೆ. ಕಳೆದ ಎರಡು ವರ್ಷಗಳಿಂದ ಕುಟುಂಬವು ಆತನಿಂದ ದೂರ ಉಳಿಯಲು ಪ್ರಯತ್ನಿಸುತ್ತಿತ್ತು.

ಇತ್ತೀಚೆಗೆ ರಕ್ಷಿತಾಳ ಮದುವೆಯನ್ನು ಸಂತೋಷ್ ಎಂಬ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ಮದುವೆ ಸಿದ್ಧತೆಗಳು ಜೋರಾಗಿದ್ದ ವೇಳೆ, ಉಲ್ಲಾಸ್ ಗೌಡ ರಕ್ಷಿತಾಳ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಾ ಮದುವೆ ಮನೆತನದವರ ಬಳಿ ಅಪಪ್ರಚಾರ ನಡೆಸಿದ್ದಾನೆ ಎನ್ನಲಾಗಿದೆ.

ಈ ನಿರಂತರ ಕಿರುಕುಳ ಮತ್ತು ಅವಮಾನ ಭೀತಿಯಿಂದ ಮನನೊಂದ ರಕ್ಷಿತಾ ಹಾಗೂ ಕುಟುಂಬಸ್ಥರು ಮದುವೆಗಾಗಿ ತಂದಿದ್ದ ಬಾಳೆಹಣ್ಣಿಗೆ ವಿಷ ಬೆರೆಸಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕುಟುಂಬವು ಡೆತ್ ನೋಟ್ ಬರೆದಿದ್ದು, ಅದರಲ್ಲಿ ಉಲ್ಲಾಸ್ ಗೌಡನ ಕಿರುಕುಳದ ಬಗ್ಗೆ ಉಲ್ಲೇಖಿಸಿರುವ ಮಾಹಿತಿ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ವರುಣಾ ಪೊಲೀಸ್ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮದುವೆ ಸಂಭ್ರಮದಿಂದ ಕಂಗೊಳಿಸಬೇಕಿದ್ದ ಮನೆ ಇಂದು ಶೋಕಸಾಗರವಾಗಿದೆ. ಕುಟುಂಬದ ಮೂವರ ಸಾವಿನಿಂದ ಗ್ರಾಮವೇ ಮೌನಕ್ಕೀಡಾಗಿದೆ.

Related News

error: Content is protected !!