ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಟೌನ್ ಠಾಣೆ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಸಾಗರದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣ ಸಂಬಂಧ ಮಂಜು ಯಾನೆ ಟೀಪುಡಿ ಮಂಜು ಹಾಗೂ ಮೃತನ ಪತ್ನಿ ಚೈತ್ರಾ ಬಂಧಿತ ಆರೋಪಿಗಳಾಗಿದ್ದಾರೆ. ಮೇ 26ರಂದು ಪೊಲೀಸ್ ಇಲಾಖೆ ಅಧಿಕೃತವಾಗಿ ಪ್ರಕರಣದ ಮಾಹಿತಿ ಬಹಿರಂಗಪಡಿಸಿದೆ.

ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಆರೋಪಿ ಮಂಜು ಹಾಗೂ ಚೈತ್ರಾ ನಡುವೆ ಅನೈತಿಕ ಸಂಬಂಧವಿದ್ದು, ಈ ವಿಚಾರ ತಿಳಿದ ಬಳಿಕ ಪರಶುರಾಮ್ ಹಾಗೂ ಚೈತ್ರಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಮೇ 15ರ ರಾತ್ರಿ ಇದೇ ವಿಚಾರವಾಗಿ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ವಿಷಯ ತಿಳಿದು ಚೈತ್ರಾಳ ಪ್ರಿಯಕರ ಮಂಜು ಮನೆಗೆ ಬಂದಿದ್ದು, ಪರಶುರಾಮ್ ಜೊತೆ ಗಲಾಟೆ ಆರಂಭವಾಗಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಪರಶುರಾಮ್ ಕುಡುಗೋಲು ಹಿಡಿದರೆ, ಮಂಜು ತನ್ನ ಬಳಿಯಿದ್ದ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡ ಪರಶುರಾಮ್ ಅವರನ್ನು ತಕ್ಷಣವೇ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಬಳಿಕ ಪತ್ನಿ ಚೈತ್ರಾ, ಇದನ್ನು ಕೇವಲ ಕೌಟುಂಬಿಕ ಜಗಳವೆಂದು ಬಿಂಬಿಸಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ ಪೊಲೀಸರು ತಮ್ಮ ತನಿಖೆಯಲ್ಲಿ ಅನೈತಿಕ ಸಂಬಂಧ ಹಾಗೂ ಕೊಲೆ ಸಂಚಿನ ಅಸಲಿ ಸತ್ಯವನ್ನು ಬಯಲಿಗೆಳೆದಿದ್ದಾರೆ.

ಪ್ರಸ್ತುತ ಚೂರಿಯಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಜು ಹಾಗೂ ಕೃತ್ಯ ಮರೆಮಾಚಲು ಸಹಕರಿಸಿದ ಆರೋಪದ ಮೇಲೆ ಚೈತ್ರಾಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Related News

error: Content is protected !!