ಸಿದ್ದಾಪುರ: ತಾಲೂಕಿನ ಕಾನಸೂರ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ ಸಾ. ವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಶಿಕ್ಷಕರೊಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹುತ್ತಗಾರ-ಹಾರ್ಸಿಕಟ್ಟಾ ನಿವಾಸಿ ಗೋಕುಲನ ತಾಯಿ ಜಯಶ್ರೀ ಕೃಷ್ಣ ಗೌಡ ಅವರು ನೀಡಿದ ದೂರಿನ ಮೇರೆಗೆ ದೂರು ದಾಖಲಾಗಿದ್ದು, ಬಿಎನ್ಎಸ್ ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ, ಗೋಕುಲ ಕೃಷ್ಣ ಗೌಡ ಕಳೆದ ಎರಡು ವರ್ಷಗಳಿಂದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಾನಸಿಕ ಹಾಗೂ ದೈಹಿಕವಾಗಿ ಸದೃಢನಾಗಿದ್ದ ಎಂದು ತಿಳಿಸಲಾಗಿದೆ. ತಾಯಿಯು ಶಾಲೆಗೆ ಮಗನನ್ನು ನೋಡಲು ಹೋದ ವೇಳೆ ಆತನ ಕುತ್ತಿಗೆ ಭಾಗ ಊದಿಕೊಂಡಿರುವುದನ್ನು ಗಮನಿಸಿದ ತಾಯಿ ವಿಚಾರಿಸಿದಾಗ, ಶಿಕ್ಷಕರೊಬ್ಬರು ಕುತ್ತಿಗೆ ಹಿಡಿದು ಎತ್ತಿದ್ದರು ಎಂದು ಮಗ ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಏಪ್ರಿಲ್ ರಜೆಯಲ್ಲಿ ಮನೆಗೆ ಬಂದಿದ್ದ ವೇಳೆ, ಶಾಲೆಯ ಹಿಂದಿ ಶಿಕ್ಷಕರಾಗಿರುವ ಅಬ್ಬು ಸರ್ ಅವರು 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳೊಂದಿಗೆ ಶೌಚಾಲಯದ ಸಮೀಪ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ತಾನು ಕಂಡಿದ್ದಾಗಿ ಗೋಕುಲ ಹೇಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಶಿಕ್ಷಕರು ಬೆದರಿಕೆ ಹಾಕಿದ್ದು, ಹೇಳಿದರೆ ಸಾಯಿಸುವುದಾಗಿ ಕುತ್ತಿಗೆ ಒತ್ತಿ ಬೆದರಿಕೆ ಹಾಕಿದ್ದರು ಎಂದು ಗೋಕುಲ ತಿಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಅಬ್ಬು ಸರ್ ಈ ಹಿಂದೆ ಹಾರ್ಸಿಕಟ್ಟಾ ಮುರಾರ್ಜಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಆರೋಪದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು ಎಂದು ತಮ್ಮ ಹಿರಿಯ ಪುತ್ರ ತಿಳಿಸಿದ್ದಾಗಿ ದೂರುದಾರರು ಉಲ್ಲೇಖಿಸಿದ್ದಾರೆ.
ಜೂನ್ 9 ರಂದು ಶಾಲೆಯಿಂದ ಫೋನ್ ಕರೆ ಬಂದಿದ್ದು, ಗೋಕುಲನ ಆರೋಗ್ಯ ಗಂಭೀರವಾಗಿದೆ ಎಂದು ತಿಳಿಸಲಾಗಿತ್ತು. ಬಳಿಕ ಶಿರಸಿ ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ, ಗೋಕುಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.
ಆದರೆ, ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ದೂರುದಾರರು ಹೇಳಿದ್ದು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ವಿರುದ್ಧದ ಗಂಭೀರ ಆರೋಪಗಳು, ಬೆದರಿಕೆ, ಹಲ್ಲೆ ಹಾಗೂ ಘಟನೆ ನಡೆದ ದಿನ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದ ಆರೋಪಗಳ ಹಿನ್ನೆಲೆಯಲ್ಲಿ ಮಗನ ಸಾವಿಗೆ ಶಿಕ್ಷಕರೇ ಕಾರಣರಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಹಾಸ್ಟೆಲ್ನಲ್ಲಿ ಘಟನೆ ನಡೆದ ಸಮಯದಲ್ಲಿ ಮಾತ್ರ ವಿದ್ಯುತ್ ಇರಲಿಲ್ಲ ಎಂಬ ಮಾಹಿತಿಯೂ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಆಧರಿಸಿ, ಗೋಕುಲ ಕೃಷ್ಣ ಗೌಡನ ಸಾವು ಆತ್ಮಹತ್ಯೆಯಲ್ಲ ಕೊಲೆ ಆಗಿರಬಹುದು ಎಂದು ತಮಗೆ ಬಲವಾದ ಅನುಮಾನವಿದೆ ಎಂದು ಜಯಶ್ರೀ ಕೃಷ್ಣ ಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸಿದ್ದಾಪುರ ಪೊಲೀಸರು ತನಿಖೆ ಆರಂಭಿಸಿದ್ದು, ಸಾವಿನ ನಿಖರ ಕಾರಣ ಹಾಗೂ ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
