ಮುಂಡಗೋಡ: ಇನ್‌ಸ್ಟಾಗ್ರಾಂ ಮೂಲಕ ಅಪ್ರಾಪ್ತ ಬಾಲಕಿಯೊಂದಿಗೆ ಪರಿಚಯ ಬೆಳೆಸಿಕೊಂಡ ಯುವಕನೊಬ್ಬ ಆಕೆಯನ್ನು ಪುಸಲಾಯಿಸಿ ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ಮುಂಡಗೋಡದಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮುಂಡಗೋಡ ಪೊಲೀಸರು ಪೋಕ್ಸೋ ಕಾಯ್ದೆ-2012ರ ಕಲಂ 4 ಮತ್ತು 6 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)-2023ರ ಕಲಂ 137(2) ಮತ್ತು 64(2)(ಎಂ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮುಂಡಗೋಡ ತಾಲೂಕಿನ ಇಂದೂರು ಗ್ರಾಮದ ನಿವಾಸಿ ಮಂಜುನಾಥ ಯಲ್ಲಪ್ಪ ವಾಲಿಕಾರ (25) ಆರೋಪಿಯಾಗಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ ಈತನಿಗೆ 17 ವರ್ಷ 1 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿಯೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಬಳಿಕ ಈ ಪರಿಚಯವನ್ನು ಬಳಸಿಕೊಂಡು ಬಾಲಕಿಯೊಂದಿಗೆ ಸಲುಗೆ ಬೆಳೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೂನ್ 14, 2026ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಆರೋಪಿಯು ಬಾಲಕಿಯನ್ನು ಮುಂಡಗೋಡ ಪಟ್ಟಣದ ಅರಣ್ಯ ಇಲಾಖೆಯ ಉದ್ಯಾನವನಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದರ ನಂತರ ಜುಲೈ 2, 2026ರಂದು ಬಾಲಕಿಯನ್ನು ಆಕೆಯ ಮನೆಯಿಂದ ಕರೆದುಕೊಂಡು ಹೋಗಿ ಅಪಹರಿಸಿದ್ದಾನೆ ಎನ್ನಲಾಗಿದೆ. ತನ್ನ ಮೋಟಾರ್‌ಸೈಕಲ್‌ನಲ್ಲಿ ಮುಂಡಗೋಡ ಬಸ್ ನಿಲ್ದಾಣಕ್ಕೆ ಕರೆತಂದು, ಅಲ್ಲಿಂದ ಹುಬ್ಬಳ್ಳಿ ಹಾಗೂ ಗೋವಾಕ್ಕೆ ಕರೆದೊಯ್ದಿದ್ದಾನೆ. ಗೋವಾದಲ್ಲಿಯೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.
