ದಿನೇ ದಿನೆ ದೆಹಲಿಯ ಶ್ರದ್ಧಾ ಹತ್ಯೆಯ ಭೀಕರ ವಿವರಗಳು ಬಿಚ್ಚಿಕೊಳ್ಳುತ್ತಿವೆ. ಶ್ರದ್ಧಾ ದೇಹವನ್ನು ಆಕೆಯ ಸೈಕೋ ಪ್ರಿಯಕರ 35 ತುಂಡುಗಳಾಗಿ ಕತ್ತರಿಸಿ ಎಸೆದಿದ್ದು, ಅದರಲ್ಲಿ ಕೆಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನೂ ಹಲವಾರು ತುಣುಕುಗಳಿಗಾಗಿ ಹುಡುಕಾಟ ನಡೆದಿದೆ. ಆಕೆಯ ತಲೆ ಇನ್ನೂ ಸಿಕ್ಕಿಲ್ಲ. ಅದು ದೊರೆತರೆ ಅಪರಾಧವನ್ನು ಸಾಕ್ಷೀಕರಿಸುವ ಗುರುತರ ಪುರಾವೆ ಲಭ್ಯವಾದಂತಾಗಲಿದೆ. ತುಣುಕುಗಳನ್ನು ಎಸೆದ ಪ್ರದೇಶಗಳಲ್ಲಿ ಅಫ್ತಾಬ್‌ನನ್ನು ಕರೆದುಕೊಂಡು ಹೋಗಿ ಪೊಲೀಸರು ತಲಾಶೆ ನಡೆಸುತ್ತಿದ್ದಾರೆ.
ಪ್ರತಿದಿನ ರಾತ್ರಿ 2 ಗಂಟೆಗೆ ಹೊರಗೆ ಹೋಗಿ ಶ್ರದ್ಧಾ ದೇಹದ ಒಂದೆರಡು ತುಣುಕನ್ನು ಎಸೆದು ಬರುತ್ತಿದ್ದ ಅಫ್ತಾಬ್‌, ತಲೆಯನ್ನು ಕತ್ತರಿಸಲು ಸಫಲನಾಗಿರಲಿಲ್ಲ. ಹೀಗಾಗಿ ಅದನ್ನು ಫ್ರಿಜ್‌ನಲ್ಲಿಟ್ಟಿದ್ದು. ʼʼಪ್ರತಿದಿನ ಅದನ್ನು ತೆಗೆದು, ನಮ್ಮ ಸಂಬಂಧದ ನೆನಪಿಗಾಗಿ ನೋಡಿಕೊಳ್ಳುತ್ತಿದ್ದೆʼʼ ಎಂದು ಪೊಲೀಸರಿಗೆ ಹೇಳಿದ್ದಾನೆ. ಎಲ್ಲ ತುಣುಕುಗಳನ್ನೂ ಎಸೆದ ಬಳಿಕ ಕೊನೆಯದಾಗಿ ತಲೆಯನ್ನು ಈತ ಬಿಸಾಡಿದ್ದ.
ತಲೆಬುರುಡೆ ದೊರೆತ ಬಳಿಕ ತಲೆಬುರುಡೆಯ ಸೂಪರ್ಇಂಪೊಸಿಷನ್ ತಂತ್ರಜ್ಞಾನ ಮೂಲಕ ಹತ್ಯೆಯಾದವಳ ಗುರುತನ್ನು ರುಜುವಾತುಪಡಿಸಲು ಪೊಲೀಸರಿಗೆ ಸಾಧ್ಯವಾಗಲಿದೆ. ಸದ್ಯ ಪೊಲೀಸರ ಬಳಿ ಇರುವ ಪುರಾವೆ ಎಂದರೆ ದೇಹದ ತುಣುಕುಗಳಿಗೂ ಶ್ರದ್ಧಾ ತಂದೆ ವಿಕಾಸ್‌ ವಾಕರ್‌ಗೂ ಇರುವ ಡಿಎನ್‌ಎ ಹೋಲಿಕೆ ಮಾತ್ರ. ಮೂಳೆಗಳನ್ನು ಡಿಎನ್‌ಎ ಸ್ಯಾಂಪಲಿಂಗ್‌ಗೆ ಕಳಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಕೃತ್ಯ ನಡೆಸಿದ ಬಳಿಕ ಮನೆಯನ್ನು ಕ್ಲೀನ್‌ ಮಾಡಲು, ದೇಹದ ತುಂಡುಗಳನ್ನು ಶೇಖರಿಸಲು ಕೀಚಕ ಅಫ್ತಾಬ್‌ ಬೋರಿಕ್‌ ಪೌಡರ್‌, ಫಾರ್ಮಾಲ್ಡಿಹೈಡ್‌, ಸಲ್ಫ್ಯೂರಿಕ್‌ ಆಮ್ಲ ಮತ್ತಿತರ ಕೆಮಿಕಲ್‌ಗಳನ್ನು ಬಳಸಿದ್ದಾನೆ. ಕೃತ್ಯ ನಡೆದು ಆರು ತಿಂಗಳಾಗಿರುವುದರಿಂದ ಸ್ಥಳ ಮಹಜರಿನಲ್ಲಿ ಗುರುತರ ಸಾಕ್ಷ್ಯಗಳಿಗಾಗಿ ಫಾರೆನ್ಸಿಕ್‌ ತಂಡವನ್ನು ಪೊಲೀಸರು ಅವಲಂಬಿಸಿದ್ದಾರೆ. ಅಫ್ತಾಬ್‌ ಕೂಡ ಕ್ಷಣಕ್ಕೊಂದು ಹೇಳಿಕೆ ನೀಡಿ, ಕೆಲವನ್ನು ಮರೆತುಬಿಟ್ಟಂತೆ ನಟಿಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾನೆ.
ಎರಡು ಮೂರು ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿರುವ ಅಫ್ತಾಬ್‌, ಹೊಟ್ಟೆ ತುಂಬಾ ಆಹಾರ ಸೇವಿಸಿ ಯಾವುದೇ ಪಶ್ಚಾತ್ತಾಪದ ಸುಳಿವೂ ಇಲ್ಲದೇ ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಿದ್ದಾನೆ ಎಂದು ಆತನ ಸಹಕೈದಿಗಳು ತಿಳಿಸಿದ್ದಾರೆ.

Related News

error: Content is protected !!