ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ಸರ್ವೋದಯ ಕಾಲೇಜಿನಲ್ಲಿ ನಡೆದ ಪರೀಕ್ಷಾ ಅಕ್ರಮವು ಶಿಕ್ಷಣ ವ್ಯವಸ್ಥೆಯ ನೈತಿಕತೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ. ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಮೊಬೈಲ್ ಬಳಸಿಕೊಂಡು ಗೂಗಲ್‌ನಲ್ಲಿ ಉತ್ತರ ಹುಡುಕಿ ಬರೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಈ ಅಕ್ರಮಕ್ಕೆ ಕಾಲೇಜಿನ ಅಧಿಕಾರಿಗಳೇ ಸಾಥ್ ನೀಡಿರುವ ಆರೋಪ ಕೇಳಿಬಂದಿದ್ದು, ಕೇವಲ ₹300 ಲಂಚದ ಮೊತ್ತಕ್ಕೆ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಡಿಜಿಟಲ್ ನಕಲು’ ಎಂಬ ಟ್ಯಾಗ್‌ನೊಂದಿಗೆ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಲು ಬಯಸಿದ್ದ ಕೆಲ ವಿದ್ಯಾರ್ಥಿಗಳು ಲಂಚ ನೀಡಲು ನಿರಾಕರಿಸಿ, ನಡೆಯುತ್ತಿದ್ದ ಅಕ್ರಮಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಾರೆ. ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಈ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾರೆ.

ಇದೇ ವೇಳೆ, ಪರೀಕ್ಷಾ ಕೇಂದ್ರದ ಮೂಲಸೌಕರ್ಯಗಳ ಕೊರತೆಯೂ ಬಯಲಾಗಿದೆ. ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಪರೀಕ್ಷೆಯಲ್ಲಿ, ಸಮರ್ಪಕ ಆಸನ ವ್ಯವಸ್ಥೆಯೇ ಇಲ್ಲದೆ ಒಂದೇ ಬೆಂಚ್‌ನಲ್ಲಿ ಮೂರು-ನಾಲ್ಕು ಮಂದಿ ಕುಳಿತು ಬರೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕೆಲವರು ನೆಲದ ಮೇಲೆಯೇ ಕುಳಿತು ಪರೀಕ್ಷೆ ಬರೆಯಬೇಕಾದ ದುಸ್ಥಿತಿಯೂ ಎದುರಾಗಿದೆ.

ಇದರ ಜೊತೆಗೆ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೌಚಾಲಯ ಸೌಲಭ್ಯಗಳೂ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇಂತಹ ಗಂಭೀರ ಅವ್ಯವಸ್ಥೆ ಮತ್ತು ಅಕ್ರಮಗಳಿಗೆ ಕಾರಣರಾದ ಕಾಲೇಜು ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ತನಿಖೆ ನಡೆಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Related News

error: Content is protected !!