ಛತ್ತೀಸ್‌ಗಢದ ಭಿಲಾಯ್ ನಗರದಲ್ಲಿ ಪ್ರೇಮ ಸಂಬಂಧಕ್ಕೆ ಸಂಬಂಧಿಸಿದ ದುರ್ಘಟನೆಯೊಂದು ಬೆಳಕಿಗೆ ಬಂದಿದೆ. ಒಯೋ ಹೋಟೆಲ್‌ನಲ್ಲಿ ತಂಗಿದ್ದ ವೇಳೆ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನೊಂದಿಗೆ ಇದ್ದ 23 ವರ್ಷದ ಯುವತಿ ಕೈಗೆ ಗಾಯ ಮಾಡಿಕೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಯುವತಿಯ ಆರೋಗ್ಯ ಗಂಭೀರವಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತನನ್ನು ವೈಶಾಲಿ ನಗರದ ನಿವಾಸಿ ಶಾದಾಬ್ ಶೇಖ್ (19) ಎಂದು ಗುರುತಿಸಲಾಗಿದೆ. ಡಿಜೆ ಆಗಿ ಕೆಲಸ ಮಾಡುತ್ತಿದ್ದ ಶಾದಾಬ್ ಬುಧವಾರ ಸಂಜೆ ತನ್ನ ಸ್ನೇಹಿತೆಯೊಂದಿಗೆ ಕೊಹ್ಕಾ ಪ್ರದೇಶದ ‘ಕುನಾಲ್ ಒಯೋ ಹೋಟೆಲ್’ಗೆ ತೆರಳಿದ್ದನು. ರಾತ್ರಿ ಇಬ್ಬರೂ ಹೋಟೆಲ್ ಕೋಣೆಯಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಶಾದಾಬ್‌ಗೆ ಮಾಜಿ ಪ್ರೇಯಸಿಯಿಂದ ಮೊಬೈಲ್ ಕರೆ ಬಂದಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಗಲಾಟೆ ತೀವ್ರಗೊಂಡ ಬಳಿಕ ಯುವತಿ ತನ್ನ ಕೈಗೆ ಗಾಯ ಮಾಡಿಕೊಂಡಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎನ್ನಲಾಗಿದೆ. ಈ ಘಟನೆಯಿಂದ ಆತಂಕಗೊಂಡ ಶಾದಾಬ್, ಕೋಣೆಯಲ್ಲಿದ್ದ ದುಪಟ್ಟಾವನ್ನು ಬಳಸಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗುರುವಾರ ಬೆಳಗ್ಗೆ ಪ್ರಜ್ಞೆ ಬಂದ ಯುವತಿ, ಶಾದಾಬ್ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡು ತಕ್ಷಣವೇ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಆದರೆ, ಪರೀಕ್ಷಿಸಿದ ವೈದ್ಯರು ಯುವಕ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಸ್ಮೃತಿ ನಗರ ಪೊಲೀಸ್ ಚೌಕಿ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೋಟೆಲ್ ಕೋಣೆಯನ್ನು ಸೀಲ್ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಯುವತಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಂಡ ನಂತರ ಘಟನೆಯ ನಿಖರ ಹಿನ್ನೆಲೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯೂ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ.

Related News

error: Content is protected !!