ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಕಾನ್ಸ್ಟೇಬಲ್ ಸಂತೋಷ್ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಸ್ಪೀಟ್ ಪ್ರಕರಣದಲ್ಲಿ ಆರೋಪಿ ಪರವಾಗಿ ಮಧ್ಯಸ್ಥಿಕೆ ವಹಿಸಿ ಲಂಚ ಬೇಡಿಕೆ ಇಟ್ಟಿದ್ದ ವೇಳೆ, ಇಬ್ಬರೂ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇಸ್ಪೀಟ್ ಆಡುತ್ತಿದ್ದ ಆರೋಪಿಯ ಬೈಕ್ ಬಿಡುಗಡೆ ಮಾಡಲು ಸುಮಾರು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಸಂಬಂಧ ಮುತ್ತಪ್ಪ ನಾಯ್ಕರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಎಸ್‌ಪಿ ಮಹಾಲಿಂಗ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪಿಎಸ್ಐ ಭೀಮಪ್ಪ ಹಾಗೂ ಪಿಸಿ ಸಂತೋಷ್ ಬಿರಾದಾರರನ್ನು 1.70 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಬಂಧಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ತಕ್ಷಣ, ಸ್ಥಳೀಯ ಯುವಕರು ಕೆರೂರು ಪೊಲೀಸ್ ಠಾಣೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಪಿಎಸ್ಐ ಭೀಮಪ್ಪ ಅವರ ವಿರುದ್ಧ ಈಗಾಗಲೇ ಹಲವು ಆರೋಪಗಳು ಕೇಳಿಬಂದಿದ್ದವು ಎನ್ನಲಾಗಿದ್ದು, ಅವರ ಬಂಧನದಿಂದ ಜನರಲ್ಲಿ ಅಸಮಾಧಾನ ಹೊರಹೋಗಿದಂತೆ ಕಂಡಿತು.
ಇನ್ನೂ ಕೆಲವರು, ಪಿಎಸ್ಐ ವಿರುದ್ಧ ಇನ್ನಷ್ಟು ಅಕ್ರಮಗಳ ಬಗ್ಗೆ ಸಾಕ್ಷಿ ನೀಡಲು ಸಿದ್ಧವಿದ್ದೇವೆ ಎಂದು ಹೇಳಿ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯ ಬಂಧನದ ನಂತರ ಇಂತಹ ಸಾರ್ವಜನಿಕ ಸಂಭ್ರಮ ಅಪರೂಪವಾಗಿದ್ದು, ಇದು ಅವರ ಕಾರ್ಯವೈಖರಿಯ ಬಗ್ಗೆ ಜನರ ಅಸಮಾಧಾನವನ್ನು ತೋರಿಸುತ್ತದೆ.
