ಬೆಂಗಳೂರು: ಹೊರರಾಜ್ಯಗಳ ಯುವತಿಯರನ್ನು ಕರೆತಂದು ಬೆಂಗಳೂರಿನಲ್ಲಿ ಅನೈತಿಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹಾಗೂ ಹಲವು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ದಲ್ಲಾಳಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚೇತನ್ ಕುಮಾರ್ ಅಲಿಯಾಸ್ ಮಂಗಳಮುಖಿ ಚೇತನ್ (40) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಚೇತನ್ ವಿರುದ್ಧ ಪೀಣ್ಯ, ಬಾಗಲಗುಂಟೆ, ಸಿಸಿಬಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತ, ಪೊಲೀಸರ ಕಣ್ತಪ್ಪಿಸಲು ಮಂಗಳಮುಖಿಯ ವೇಷ ಧರಿಸಿ ಓಡಾಡುತ್ತಿದ್ದ ಎನ್ನಲಾಗಿದೆ.

ಈ ವೇಷವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ದೆಹಲಿ, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ಯುವತಿಯರನ್ನು ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನೆಂದು ತನಿಖೆಯಲ್ಲಿ ತಿಳಿದುಬಂದಿದೆ. ಈತನ ಬಂಧನಕ್ಕಾಗಿ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು.

ಜುಲೈ 6ರಂದು ಪೀಣ್ಯ ರಸ್ತೆಯ ಸಮೀಪದ ಲಾಡ್ಜ್‌ ಒಂದರಲ್ಲಿ ಆರೋಪಿ ತಂಗಿರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಬಂಧಿತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಈತನ ಜಾಲದಲ್ಲಿ ಇನ್ನೂ ಯಾರು ಭಾಗಿಯಾಗಿದ್ದಾರೆ, ಯಾವೆಲ್ಲ ಪ್ರದೇಶಗಳಲ್ಲಿ ದಂಧೆ ನಡೆಸಲಾಗುತ್ತಿತ್ತು ಹಾಗೂ ಇದರ ಹಿಂದಿರುವ ಜಾಲದ ಬಗ್ಗೆ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Related News

error: Content is protected !!