ಉತ್ತರಾಖಂಡದಲ್ಲಿ ಪ್ರೀತಿಸಿ ಮದುವೆಯಾದ ಪತಿಯನ್ನೇ ಪತ್ನಿಯೊಬ್ಬಳು ಅಕ್ರಮ ಸಂಬಂಧದ ಕಾರಣಕ್ಕೆ ಹತ್ಯೆ ಮಾಡಿಸಿ, ಬಳಿಕ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಉತ್ತರಾಖಂಡದ ರಾಮನಗರ ನಿವಾಸಿ ಸಂಜೀವ್ ಕುಮಾರ್ (24) ಟೆಂಟ್ ಹೌಸ್ ನಡೆಸುತ್ತಿದ್ದರು. ಸುಮಾರು ಐದು ವರ್ಷಗಳ ಹಿಂದೆ ಕುಟುಂಬದ ವಿರೋಧದ ನಡುವೆಯೂ ನಿಶಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.

ಆದರೆ, ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಸಂಜೀವ್ ಅವರ ಟೆಂಟ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಬಾಲಕನೊಂದಿಗೆ ನಿಶಾ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದು ಭಾವಿಸಿ, ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾಳೆ ಎನ್ನಲಾಗಿದೆ.

ಆಗಸ್ಟ್ 16ರಂದು ಹುಟ್ಟುಹಬ್ಬದ ಪಾರ್ಟಿಗೆ ಹೋಗುವ ನೆಪದಲ್ಲಿ ಸಂಜೀವ್ ಅವರನ್ನು ಕಾರಿನಲ್ಲಿ ಕರೆದೊಯ್ಯಲಾಗಿದೆ. ಸಂಜೀವ್ ಕಾರು ಚಲಾಯಿಸುತ್ತಿದ್ದ ವೇಳೆ ಹಿಂಬದಿ ಸೀಟಿನಲ್ಲಿದ್ದ ಅಪ್ರಾಪ್ತ ಬಾಲಕ ಆತನ ಕುತ್ತಿಗೆಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಗುಂಡೇಟಿನಿಂದ ನಿಯಂತ್ರಣ ಕಳೆದುಕೊಂಡ ಕಾರು ಗದ್ದೆಗೆ ನುಗ್ಗಿದ್ದು, ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಇತ್ತ ಸಂಜೀವ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ನಂಬಿಸಲು ನಿಶಾ ಪ್ರಯತ್ನಿಸಿದ್ದಳು. ಆದರೆ, ಪೋಸ್ಟ್‌ಮಾರ್ಟಂ ವರದಿ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಸಂಜೀವ್ ಅವರ ಕುತ್ತಿಗೆ ಭಾಗದಲ್ಲಿ ಗುಂಡು ಪತ್ತೆಯಾಗಿದ್ದು, ಇದು ಅಪಘಾತವಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ.

ಇದರಿಂದ ತನಿಖೆ ಚುರುಕುಗೊಳಿಸಿದ ಪೊಲೀಸರು ನಿಶಾಳನ್ನು ವಿಚಾರಣೆ ನಡೆಸಿದಾಗ, ಪ್ರಕರಣದ ಹಿಂದಿನ ಸಂಚು ಬಯಲಾಗಿದೆ ಎನ್ನಲಾಗಿದೆ. ಕೊನೆಗೆ ನಿಶಾ ಹಾಗೂ ಹತ್ಯೆಗೆ ಸಹಕರಿಸಿದ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರೀತಿಸಿ ಮದುವೆಯಾದ ಪತಿಯ ಸಾವು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಪತ್ನಿಯ ಸಂಚು, ಪೋಸ್ಟ್‌ಮಾರ್ಟಂ ವರದಿಯಿಂದಲೇ ಬಯಲಾಗಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

Related News

error: Content is protected !!