
ಬೆಂಗಳೂರು: ಗಂಡ ಮತ್ತು ಐದು ವರ್ಷದ ಮಗನ ನಿಗೂಢ ಸಾವಿನ ಪ್ರಕರಣ ಬೆಂಗಳೂರಿನ ಚಿಕ್ಕಬಾಣಾವರ ಸಮೀಪದ ಗುಡ್ಡೆಬಸವಪುರದಲ್ಲಿ ಆತಂಕ ಮೂಡಿಸಿದೆ. ಒಂದೇ ಮನೆಯಲ್ಲಿ ಅಭಿನಂದನ್ (35) ಹಾಗೂ ಅವರ ಪುತ್ರ ಯದುವೀರ್ (5) ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣದ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಘಟನೆ ಬೆಳಕಿಗೆ ಬಂದಿದ್ದು, ಅಭಿನಂದನ್ ಅವರ ಪತ್ನಿ ಹರಿಣಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ, ತನ್ನ ಗಂಡ ಹಾಗೂ ಮಗ ಮಾತನಾಡುತ್ತಿಲ್ಲ ಎಂದು ಮಾಹಿತಿ ನೀಡಿದ ಬಳಿಕ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಇಬ್ಬರೂ ಮೃತಪಟ್ಟಿರುವುದು ಪತ್ತೆಯಾಗಿದೆ.
ಮೃತದೇಹಗಳ ಮೇಲೆ ದೊಡ್ಡ ಪ್ರಮಾಣದ ಗಾಯದ ಗುರುತುಗಳು ಕಂಡುಬಂದಿಲ್ಲ ಎನ್ನಲಾಗಿದ್ದರೂ, ಸಾವಿನ ಪರಿಸ್ಥಿತಿ ಅನುಮಾನ ಮೂಡಿಸಿದೆ. ಇದೇ ವೇಳೆ ಹರಿಣಿ ನೀಡಿರುವ ಹೇಳಿಕೆಯಲ್ಲೂ ಪೊಲೀಸರಿಗೆ ಕೆಲವು ಅನುಮಾನಗಳು ಕಂಡುಬಂದಿವೆ ಎನ್ನಲಾಗಿದೆ.
ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಹೊರಗಿನ ವ್ಯಕ್ತಿಯೊಬ್ಬ ಮನೆಗೆ ಪ್ರವೇಶಿಸಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ, ಕೆಲ ತಿಂಗಳ ಹಿಂದೆ ಹರಿಣಿ ಸುಮಾರು ಮೂರು ತಿಂಗಳ ಕಾಲ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದ್ದು, ಈ ವಿಚಾರವೂ ತನಿಖೆಯ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹರಿಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಭಿನಂದನ್ ಅವರ ಪೋಷಕರು ಕೂಡ ತಮ್ಮ ಮಗ ಹಾಗೂ ಮೊಮ್ಮಗನ ಸಾವಿನ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಪ್ರಕರಣದಲ್ಲಿ ಹರಿಣಿಯ ಪಾತ್ರವಿದೆಯೇ ಅಥವಾ ಮೂರನೇ ವ್ಯಕ್ತಿಯ ಕೈವಾಡವಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕ ಇಬ್ಬರ ಸಾವಿಗೆ ನಿಖರ ಕಾರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.
ಸದ್ಯ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಯಾವುದೇ ವ್ಯಕ್ತಿಯ ವಿರುದ್ಧದ ಆರೋಪಗಳು ದೃಢಪಟ್ಟಿಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.






