ಮಡಿಕೇರಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರು ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ‘ಕೂರ್ಗ್ ವೈಲ್ಡರ್‌ನೆಸ್’ ರೆಸಾರ್ಟ್‌ನಲ್ಲಿ ಕುಟುಂಬಸ್ಥರು, ರಾಜಕೀಯ ಗಣ್ಯರು ಹಾಗೂ ಚಿತ್ರರಂಗದ ಪ್ರಮುಖರ ಸಮ್ಮುಖದಲ್ಲಿ ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

ನಲಪಾಡ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮಲಿಹಾ ಫಾತಿಮಾ ಅವರು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಅವರ ಪುತ್ರಿ. ಕಾನೂನು ಪದವೀಧರೆಯಾಗಿರುವ ಮಲಿಹಾ ಫಾತಿಮಾ ಅವರು ಅಮೆರಿಕ ಮೂಲದ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಎರಡು ದಶಕಗಳ ಸ್ನೇಹ ನೆಂಟಸ್ತಿಕೆಯಾಗಿ ಪರಿವರ್ತನೆ

ಎನ್.ಎ. ಹ್ಯಾರಿಸ್ ಹಾಗೂ ಎಸ್.ಐ. ಮುನೀರ್ ಅಹಮ್ಮದ್ ಅವರ ನಡುವೆ ಕಳೆದ ಎರಡು ದಶಕಗಳಿಂದ ಆಪ್ತ ಸ್ನೇಹವಿದೆ. ಇದೀಗ ಈ ಸ್ನೇಹ ಎರಡು ಕುಟುಂಬಗಳ ನಡುವಿನ ವೈವಾಹಿಕ ಸಂಬಂಧವಾಗಿ ಪರಿವರ್ತನೆಯಾಗಿದೆ. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ನಲಪಾಡ್ ಹಾಗೂ ಮಲಿಹಾ ಫಾತಿಮಾ ಅವರ ವಿವಾಹ ನಿಶ್ಚಯವಾಗಿತ್ತು.

ರಾಜಕೀಯ, ಚಿತ್ರರಂಗದ ಗಣ್ಯರ ಉಪಸ್ಥಿತಿ

ಹೈ-ಪ್ರೊಫೈಲ್ ವಿವಾಹ ಸಮಾರಂಭಕ್ಕೆ ರಾಜಕೀಯ ಹಾಗೂ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ನಿಯೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸ್ಯಾಂಡಲ್‌ವುಡ್ ನಟರಾದ ಕಿಚ್ಚ ಸುದೀಪ್ ಹಾಗೂ ಯಶ್ ಅವರ ಆಗಮನವೂ ವಿವಾಹ ಸಮಾರಂಭಕ್ಕೆ ವಿಶೇಷ ಮೆರುಗು ತಂದಿತು.

ಐದು ದಿನಗಳ ಕಾಲ ಮದುವೆ ಸಂಭ್ರಮ

ಆಗಸ್ಟ್ 15ರಿಂದ 20ರವರೆಗೆ ವಿವಿಧ ಮದುವೆ ಶಾಸ್ತ್ರಗಳು ನಡೆಯಲಿವೆ. ಆಗಸ್ಟ್ 16ರಂದು ನಿಕಾಹ್ ನೆರವೇರಿದ್ದು, ಆಗಸ್ಟ್ 17ರಂದು ಅದ್ಧೂರಿ ಆರತಕ್ಷತೆ ಆಯೋಜಿಸಲಾಗಿದೆ. ವಿವಾಹ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೆಸಾರ್ಟ್‌ನ 104 ಕೊಠಡಿಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದ್ದು, ಭದ್ರತಾ ಕಾರಣಗಳಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಮೊಹಮ್ಮದ್ ನಲಪಾಡ್ ಅವರಿಗೆ ಇದು ಎರಡನೇ ವಿವಾಹವಾಗಿದ್ದು, ಈ ಹಿಂದೆ 2017ರಲ್ಲಿ ಸಮ್ರೀನ್ ಅವರೊಂದಿಗೆ ವಿವಾಹವಾಗಿದ್ದರು. ಇದೀಗ ಕೊಡಗಿನ ಅಳಿಯನಾಗಿ ನಲಪಾಡ್ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Related News

error: Content is protected !!