
ಮಾಲೂರು: ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದ ಸಮೀಪ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 700 ಗ್ರಾಂ ಗಾಂಜಾವನ್ನು ಮಾಲೂರು ಅಬಕಾರಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ತೆನೆ, ಹೂ ಮತ್ತು ಬೀಜ ಮಿಶ್ರಿತ ಒಣ ಗಾಂಜಾವನ್ನು ಮಾರಾಟ ಮಾಡಲು ಸಂಗ್ರಹಿಸಲಾಗಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ನೊಸಗೆರೆ ಗ್ರಾಮದ ಮೂರನೇ ಹಂತದಲ್ಲಿ ನಡೆದ ದಾಳಿಯಲ್ಲಿ, ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಒರಿಸ್ಸಾ ರಾಜ್ಯದ ಜಮಾದನ್ ಸಮಾಲ್ (38) ಮತ್ತು ಉತ್ತರ ಪ್ರದೇಶದ ವಿಶಾಲ್ ಚೌವ್ಹಾಣ್ (20) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳು ಬಳಸುತ್ತಿದ್ದ ದ್ವಿಚಕ್ರ ವಾಹನವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಒಟ್ಟು ₹57,000 ಮೌಲ್ಯದ ಗಾಂಜಾ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಜಿ. ಬಾಲಕೃಷ್ಣ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಶ್ರೀನಿವಾಸಮೂರ್ತಿ, ಕೋಲಾರದ ಉಪ ವಿಭಾಗದ ಅಧಿಕಾರಿ ಪಿ.ಕೆ. ಶಶಿಕಲಾ, ಮಾಲೂರು ವಲಯದ ಅಬಕಾರಿ ನಿರೀಕ್ಷಕ ಜಿ. ಬಾಲಕೃಷ್ಣ, ಉಪ ನಿರೀಕ್ಷಕ ವಿ. ಗಜೇಂದ್ರ ಕುಮಾರ್ ಹಾಗೂ ಮುಖ್ಯ ಪೇದೆಗಳಾದ ವೀರೇಶ್, ಗಿರಿಜಾಪತಿ, ರಜನಿಕಾಂತ್ ಭಾಗವಹಿಸಿದ್ದರು.






