ಮಹಿಳೆಯರ ಮೇಲಿನ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ ಪುಂಡರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಕೈಗೊಂಡ ದಿಟ್ಟ ಕ್ರಮ ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಹೈದರಾಬಾದ್‌ನ ದಿಲ್ ಸುಖ್ ನಗರದ ಜನನಿಬಿಡ ಬಸ್ ನಿಲ್ದಾಣದಲ್ಲಿ ಮಲ್ಕಾಜ್ ಗಿರಿ ಪೊಲೀಸ್ ಕಮಿಷನರ್ ಬಿ. ಸುಮತಿ ಅಂಡರ್‌ಕವರ್ ಕಾರ್ಯಾಚರಣೆ ನಡೆಸಿದ್ದಾರೆ. ಮಧ್ಯರಾತ್ರಿ ಸುಮಾರು 2:30ರ ವೇಳೆಗೆ ಸಾಮಾನ್ಯ ಮಹಿಳೆಯಂತೆ ವೇಷಧರಿಸಿ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಒಂಟಿಯಾಗಿ ನಿಂತಿದ್ದ ಮಹಿಳೆಯನ್ನು ಕಂಡ ಕೆಲ ಬೀದಿ ಕಾಮಣ್ಣರು ಹಾಗೂ ಪುಂಡ ಯುವಕರು ಬೈಕ್‌ಗಳಲ್ಲಿ ಸ್ಥಳಕ್ಕಾಗಮಿಸಿ ಕಿರುಕುಳ ನೀಡಲು ಮುಂದಾಗಿದ್ದಾರೆ. ಮಹಿಳೆ ಪೊಲೀಸ್ ಅಧಿಕಾರಿ ಎಂಬ ಅರಿವಿಲ್ಲದೇ ಅಸಭ್ಯವಾಗಿ ಮಾತನಾಡುವುದು, ಕೆಟ್ಟ ಪ್ರಶ್ನೆಗಳನ್ನು ಕೇಳುವುದು ಸೇರಿದಂತೆ ತಮ್ಮ ಪುಂಡಾಟ ಮುಂದುವರಿಸಿದ್ದಾರೆ.

ಆದರೆ ಇದರಿಂದ ವಿಚಲಿತರಾಗದ ಕಮಿಷನರ್ ಸುಮತಿ, ಮಾರುವೇಷದಲ್ಲಿದ್ದ ಎಸ್‌ಐ, ಇನ್ಸ್‌ಪೆಕ್ಟರ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಪುಂಡರನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.

ಈ ದಿಢೀರ್ ಕಾರ್ಯಾಚರಣೆಯಲ್ಲಿ ಸುಮಾರು 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ದಿಲ್ ಸುಖ್ ನಗರದಲ್ಲಿನ ಹಾಸ್ಟೆಲ್ ಪ್ರದೇಶಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿದ್ದ ಹಿನ್ನೆಲೆ, ಕಮಿಷನರ್ ಸುಮತಿ ಸ್ವತಃ ಮೈದಾನಕ್ಕಿಳಿದು ಕಾರ್ಯಾಚರಣೆ ನಡೆಸಿದ್ದಾರೆ. ಮಹಿಳಾ ಸುರಕ್ಷತೆ ವಿಚಾರದಲ್ಲಿ ಪೊಲೀಸರ ಈ ದಿಟ್ಟ ಹೆಜ್ಜೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

error: Content is protected !!