ಮಕ್ಕಳ ಆರೈಕೆ ಮತ್ತು ಸುರಕ್ಷತೆಗೆ ಮೀಸಲಾಗಿರುವ ಅಂಗನವಾಡಿ ಕೇಂದ್ರದಲ್ಲೇ ಪುಟ್ಟ ಮಗುವಿನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಗುವಿನ ಎದೆಗೆ ಕಾಲಿನಿಂದ ಒದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಮಹಾರಾಷ್ಟ್ರದ ಪನ್ವೇಲ್ ವ್ಯಾಪ್ತಿಯ ನಂದ್‌ಗಾಂವ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ವಿಡಿಯೋದಲ್ಲಿ ಅಂಗನವಾಡಿ ಭವನದ ಮೆಟ್ಟಿಲಿನ ಮೇಲೆ ಕುಳಿತಿದ್ದ ಪುಟ್ಟ ಮಗುವಿನ ಬಳಿ ಬಂದ ಮಹಿಳಾ ಕಾರ್ಯಕರ್ತೆ, ಆಕಸ್ಮಿಕವಾಗಿ ಅಲ್ಲ, ಉದ್ದೇಶಪೂರ್ವಕವಾಗಿ ಮಗುವಿನ ಎದೆ ಭಾಗಕ್ಕೆ ಬೂಟುಕಾಲಿನಿಂದ ಒದ್ದಿರುವ ದೃಶ್ಯ ಕಾಣಿಸುತ್ತದೆ.
ಒದೆತದ ಪರಿಣಾಮ ಮಗು ತಕ್ಷಣವೇ ಹಿಂದಕ್ಕೆ ಬಿದ್ದು ನೋವಿನಿಂದ ಜೋರಾಗಿ ಅಳಲು ಆರಂಭಿಸಿದೆ. ಈ ದೃಶ್ಯ ಕಂಡ ಮತ್ತೊಂದು ಮಗು ಕೂಡ ಭಯದಿಂದ ಅತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಘಟನೆಯ ವೇಳೆ ಅಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಮಗುವನ್ನು ಎಬ್ಬಿಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ, ಮಗುವಿನ ಮೇಲೆ ಹಲ್ಲೆ ನಡೆಸಿದ ಕಾರ್ಯಕರ್ತೆಯನ್ನು ಪ್ರಶ್ನಿಸುವ ಬದಲು ಆಕೆಯೊಂದಿಗೆ ನಗುತ್ತಾ ಮಾತನಾಡಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಅಮಾನವೀಯ ಕೃತ್ಯವನ್ನು ಅಲ್ಲಿಂದ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ನವಿ ಮುಂಬೈ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಕ್ಕಳ ರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿ ಹೊತ್ತಿರುವವರೇ ಈ ರೀತಿಯಾಗಿ ವರ್ತಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.
