ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಮಹಿಳಾ ವೈದ್ಯೆ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಂಧಿತರನ್ನು ಕೆ.ಆರ್.ಪೇಟೆಯ ಚೇತನ ಮೆಟರ್ನಿಟಿ ಸೆಂಟರ್‌ನ ಡಾ. ದಿವ್ಯಚೇತನಾ, ನಾವಿ ಡಯಾಗ್ನೋಸ್ಟಿಕ್ ಸೆಂಟರ್‌ನ ಡಾ. ವೈ.ಆರ್. ಹರ್ಷಿತ್ ಹಾಗೂ ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ನ ಡಾ. ಹರೀಶ್ ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ವೈದ್ಯೆಯನ್ನು ಡಾ. ಪ್ರಿಯಾಂಕಾ ಎಂದು ತಿಳಿದುಬಂದಿದೆ.

ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಉಪ ಲೋಕಾಯುಕ್ತ ಬಿ. ವೀರಪ್ಪ ತನಿಖೆಗೆ ಆದೇಶ ನೀಡಿದ ಹಿನ್ನೆಲೆ, ಲೋಕಾಯುಕ್ತ ಪೊಲೀಸರು ಏಪ್ರಿಲ್ 17ರಂದು ಏಕಕಾಲದಲ್ಲಿ ದಾಳಿ ನಡೆಸಿದರು. ಈ ವೇಳೆ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದು ಬಹಿರಂಗವಾಯಿತು.

ತನಿಖೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಖಾಸಗಿ ಕೇಂದ್ರಗಳಲ್ಲಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಮಾತ್ರವೇ 7 ಪ್ರಕರಣಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಗೆ ಸ್ಕ್ಯಾನಿಂಗ್ ಮಾಡಿರುವುದು ಪತ್ತೆಯಾಗಿದೆ. ಜೊತೆಗೆ, 64 ಪ್ರಕರಣಗಳಲ್ಲಿ 18 ರಿಂದ 20 ವರ್ಷ ವಯಸ್ಸಿನ ಮಹಿಳೆಯರ ವಯಸ್ಸಿನ ದೃಢೀಕರಣ ದಾಖಲೆ ಪಡೆಯದೇ ಸ್ಕ್ಯಾನಿಂಗ್ ನಡೆಸಿರುವುದು ಕಂಡುಬಂದಿದೆ.

ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳು ದೂರು ದಾಖಲಿಸಿದ್ದು, ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ವಿವಿಧ ಕಲಂಗಳು ಹಾಗೂ ಪೋಕ್ಸೋ ಕಾಯ್ದೆಯಡಿ ಒಟ್ಟು 12 ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರಸ್ತುತ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ವೈದ್ಯೆಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related News

error: Content is protected !!