ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೊರ್ನಹಳ್ಳಿ ಸಮೀಪದ ಸುಮಾರು 16 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಭೂಗಳ್ಳರು ಅಕ್ರಮವಾಗಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಮಾಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ವೇಳೆ ಮಾಜಿ ಶಾಸಕ ಮಂಜುನಾಥ್ ಗೌಡ ಅವರು ಹಳೆಯ ಕಂದಾಯ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ತೊರ್ನಹಳ್ಳಿ ಬಳಿಯಿರುವ ಈ ಜಮೀನು 1961ರ ಅಧಿಕೃತ ದಾಖಲೆಗಳ ಪ್ರಕಾರ ಸರ್ಕಾರಿ ಭೂಮಿಯಾಗಿ ದಾಖಲಾಗಿತ್ತು ಎಂದು ತಿಳಿಸಿದರು. ಆದರೆ 1963ರಲ್ಲಿ ಸರ್ಕಾರಿ ರಜಾ ದಿನದಂದೇ ಕೆಲ ಅಧಿಕಾರಿಗಳ ಶಾಮೀಲಿನಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಶೋಕ್ ಜೈನ್ ಎಂಬುವರ ಹೆಸರಿಗೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಪ್ರಸ್ತುತ ಈ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇದು ಜಿಲ್ಲೆಯ ಅತಿದೊಡ್ಡ ಭೂ ಹಗರಣಗಳಲ್ಲಿ ಒಂದಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ತಹಶೀಲ್ದಾರ್ ರೂಪಾ ಅವರ ಸಮ್ಮುಖದಲ್ಲಿ ದಾಖಲೆಗಳನ್ನು ಮಂಡಿಸಿ ಅಕ್ರಮಗಳ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದ ವೇಳೆ, ಸೂಕ್ತ ಉತ್ತರ ನೀಡಲು ಸಾಧ್ಯವಾಗದೆ ತಹಶೀಲ್ದಾರ್ ಕಚೇರಿಯಿಂದ ಹೊರನಡೆದರು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಬೆಳವಣಿಗೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು.

ಇಂತಹ ಭೂ ಹಗರಣಕ್ಕೆ ಕಾರಣರಾದ ಅಂದಿನ ಹಾಗೂ ಇಂದಿನ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಗೌಡ ಆಗ್ರಹಿಸಿದರು. ಜೊತೆಗೆ, ಅಕ್ರಮವಾಗಿ ಕಬಳಿಕೆಯಾಗಿರುವ 16 ಎಕರೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಕೂಡಲೇ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ, ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಮಂಜುನಾಥ್ ಗೌಡ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Related News

error: Content is protected !!