ಬೆಂಗಳೂರು: ರಾಜಧಾನಿಯ ರಿಯಲ್ ಎಸ್ಟೇಟ್ ವಂಚನೆ ಪ್ರಕರಣಗಳಲ್ಲಿ ಅತ್ಯಂತ ಸಂಚಲನ ಮೂಡಿಸಿರುವ ಪ್ರಕರಣವೊಂದನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸೇರಿದ ಸುಮಾರು ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ವಂಶವೃಕ್ಷ ಮತ್ತು ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ ಆರೋಪದಡಿ 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.

45 ಎಕರೆ ಮಠದ ಜಮೀನಿನಲ್ಲಿ 6 ಎಕರೆ ಮೇಲೆ ಕಣ್ಣು

ಸುಮಾರು 30 ವರ್ಷಗಳ ಹಿಂದೆ ಭಕ್ತರು ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೆ ನಂಬರ್ 43ರಲ್ಲಿ ಒಟ್ಟು 45 ಎಕರೆ ಜಮೀನನ್ನು ಆದಿಚುಂಚನಗಿರಿ ಮಠಕ್ಕೆ ಕಾಣಿಕೆಯಾಗಿ ನೀಡಿದ್ದರು ಎನ್ನಲಾಗಿದೆ. ಈ ಪೈಕಿ 6 ಎಕರೆ ಜಮೀನನ್ನು ಗುರಿಯಾಗಿಸಿಕೊಂಡ ಆರೋಪಿಗಳು, ಖಾಸಗಿ ಬ್ರೋಕರ್‌ಗಳು ಹಾಗೂ ಕೆಲ ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಮಶಾನದಲ್ಲಿ ಸಮಾಧಿ ಹುಡುಕಿ ವಾರಸುದಾರರ ಸೃಷ್ಟಿ!

ತನಿಖೆಯಲ್ಲಿ ಬೆಳಕಿಗೆ ಬಂದಿರುವ ಮಾಹಿತಿಯ ಪ್ರಕಾರ, ನೆಲಮಂಗಲ ಮೂಲದ ನರೇಶ್ ಗೌಡ ಈ ಪ್ರಕರಣದ ಪ್ರಮುಖ ಸೂತ್ರಧಾರ ಎನ್ನಲಾಗಿದೆ. ಮಠದ ಜಮೀನಿನ ಮೂಲ ಮಾಲೀಕರ ಹೆಸರಿಗೆ ಹೊಂದಾಣಿಕೆಯಾಗುವ ವ್ಯಕ್ತಿಯ ಕುಟುಂಬದ ವಿವರಗಳನ್ನು ಪತ್ತೆಹಚ್ಚಲು ಆರೋಪಿಗಳು ಸ್ಮಶಾನಗಳಲ್ಲಿಯೂ ಹುಡುಕಾಟ ನಡೆಸಿದ್ದರು ಎಂಬ ಆರೋಪವಿದೆ.

ಈ ವೇಳೆ ರೌಡಿಶೀಟರ್ ಫ್ರಾನ್ಸಿಸ್ ಎಂಬಾತನ ತಂದೆಯ ಹೆಸರು ಮತ್ತು ವಯಸ್ಸು ಜಮೀನಿನ ಮೂಲ ಮಾಲೀಕರ ವಿವರಗಳಿಗೆ ಹೊಂದಿಕೆಯಾಗಿದ್ದನ್ನು ಬಳಸಿಕೊಂಡು, ಫ್ರಾನ್ಸಿಸ್ ಮತ್ತು ಆತನ ಸಹೋದರಿ ಜೋಸ್ವಾನ್ ಅವರನ್ನು ಮೂಲ ಮಾಲೀಕರ ವಾರಸುದಾರರೆಂದು ಬಿಂಬಿಸುವ ನಕಲಿ ವಂಶವೃಕ್ಷ ಹಾಗೂ ಸಾಲಾವಳಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ನಕಲಿ ದಾಖಲೆಗಳಿಗೆ ಸರ್ಕಾರಿ ಮುದ್ರೆ!

ನಕಲಿ ದಾಖಲೆಗಳಿಗೆ ಅಧಿಕೃತ ಮಾನ್ಯತೆ ದೊರಕಿಸಲು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಸಹಕರಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಬೇಗೂರು ಮತ್ತು ಕೆಂಗೇರಿ ಭಾಗದ ಗ್ರಾಮ ಆಡಳಿತ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನಕಲಿ ವಂಶವೃಕ್ಷಕ್ಕೆ ಅನುಮೋದನೆ ನೀಡುವುದು ಮತ್ತು ಪೌತಿ ಖಾತೆ ಮಾಡಿಕೊಡುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ನಂತರ ಆರೋಪಿಗಳು ನ್ಯಾಯಾಲಯದ ಆದೇಶಗಳನ್ನು ಪಡೆದು ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು, ಮೂರನೇ ವ್ಯಕ್ತಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

17 ಆರೋಪಿಗಳ ಪೈಕಿ 11 ಮಂದಿ ಬಂಧನ

ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿರುವುದಾಗಿ ತಿಳಿದುಬಂದಿದ್ದು, ಈವರೆಗೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಬ್ರೋಕರ್ ಆರೋಗ್ಯಸ್ವಾಮಿ, ಫ್ರಾನ್ಸಿಸ್, ಜೋಸ್ವಾನ್, ಶ್ರೀನಿವಾಸ ನರೇಂದ್ರ ಸೇರಿದಂತೆ ಖಾಸಗಿ ವ್ಯಕ್ತಿಗಳು ಹಾಗೂ ಕಂದಾಯ ಇಲಾಖೆಗೆ ಸೇರಿದ ಆರು ಮಂದಿ ಅಧಿಕಾರಿಗಳು ಸೇರಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನರೇಶ್ ಗೌಡ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ವ್ಯವಸ್ಥಿತ ಭೂ ಕಬಳಿಕೆ ಜಾಲದ ಶಂಕೆ

ಪ್ರಕರಣದ ಕುರಿತು ಮಾಹಿತಿ ನೀಡಿರುವ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್, ನಕಲಿ ವಂಶವೃಕ್ಷ ಮತ್ತು ದಾಖಲೆಗಳ ಮೂಲಕ ಮಠದ 6 ಎಕರೆ ಜಮೀನನ್ನು ಕಬಳಿಸಲು ಸಂಚು ರೂಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ತನಿಖೆಯಲ್ಲಿ ಕಂದಾಯ ಇಲಾಖೆಯ ವಿವಿಧ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳ ಶಾಮೀಲಾತಿ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಸುತ್ತಮುತ್ತ ಇದೇ ಮಾದರಿಯ ವ್ಯವಸ್ಥಿತ ಭೂ ಕಬಳಿಕೆ ಜಾಲಗಳು ಸಕ್ರಿಯವಾಗಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಮಠದ ಆಸ್ತಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಆರೋಪದ ಈ ಪ್ರಕರಣ ಇದೀಗ ರಾಜಧಾನಿಯಲ್ಲಿ ಭಾರಿ ಸಂಚಲನ ಮೂಡಿಸಿದೆ.

Related News

error: Content is protected !!