ಬೆಂಗಳೂರು ಹೊರವಲಯದ ಕಾಡುಗೋಡಿ ಸಮೀಪದ ಚನ್ನಸಂದ್ರದ ಎಕೆಜಿ ಕಾಲೋನಿಯಲ್ಲಿ ಫೇಕ್ ಅಟ್ರಾಸಿಟಿ ಕೇಸ್‌ನಿಂದ ಮನನೊಂದು ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಾಪಣ್ಣ (42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಸಾವಿಗೆ ಮುನ್ನ ವಿಡಿಯೋ ಸಂದೇಶ ದಾಖಲಿಸಿ ಕೆಲವು ಮಂದಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜೋಗಿ ಸೀನಾ, ಪ್ರಶಾಂತ್, ಸಂತೋಷ, ರಾಧಾ ಹಾಗೂ ಲಲಿತ್ ಕುಮಾರ್ ಸೇರಿದಂತೆ ಅವರ ಕುಟುಂಬದವರೇ ನನ್ನ ಸಾವಿಗೆ ಕಾರಣ ಎಂದು ಪಾಪಣ್ಣ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ 2021ರಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸಿ ಬಳಿಕ ಕೇಸ್ ವಾಪಸ್ ಪಡೆಯಲು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಇದೀಗ ಮತ್ತೊಮ್ಮೆ ಸುಳ್ಳು ಪ್ರಕರಣ ದಾಖಲಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪಾಪಣ್ಣ ದೂರಿದ್ದಾರೆ. “ನಾನು ಬಡ ವ್ಯಾಪಾರಿ. ಸುಳ್ಳು ಕೇಸ್‌ಗಳ ಮೂಲಕ ಹಣ ಮಾಡುವ ಕೆಲಸ ನಡೆಯುತ್ತಿದೆ. ನನ್ನ ಕುಟುಂಬ ಹಾಗೂ ತಂಗಿಯನ್ನು ಕಾಪಾಡಿ” ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ನಿನ್ನೆ ರಾತ್ರಿ ಸುಮಾರು 10:05ರ ವೇಳೆಗೆ ವಿಡಿಯೋ ಕಳುಹಿಸಿದ್ದ ಪಾಪಣ್ಣ, ಬಳಿಕ ವಿಷ ಸೇವಿಸಿರುವುದಾಗಿ ತಿಳಿದುಬಂದಿದೆ. ಘಟನೆ ಮಾಹಿತಿ ತಿಳಿದ ತಕ್ಷಣ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತನ ತಂಗಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಭಾಗ್ಯಶ್ರೀ ನೀಡಿದ ದೂರಿನ ಮೇರೆಗೆ, ವಿಡಿಯೋ ಆಧಾರವಾಗಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
