ನ್ಯೂಯಾರ್ಕ್ – ಅಮೆರಿಕಾದ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಭಾರತೀಯ ಸಮಯ ಪ್ರಕಾರ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ಸಂಭವಿಸಿದೆ. ಮಿಯಾಮಿಗೆ ತೆರಳಲು ಸಿದ್ಧವಾಗಿದ್ದ ಅಮೆರಿಕನ್ ಏರ್ಲೈನ್ಸ್‌ನ ಬೋಯಿಂಗ್ 737 MAX 8 ವಿಮಾನವು ಟೇಕ್ ಆಫ್‌ಗೆ ತಯಾರಾಗುವ ಸಂದರ್ಭದಲ್ಲೇ ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ಬೆಂಕಿ ಹೊತ್ತಿಕೊಂಡು ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ತಕ್ಷಣದ ಪ್ರತಿಕ್ರಿಯೆಯಿಂದ 173 ಜನರ ಜೀವ ರಕ್ಷಣೆ
AA-3023 ವಿಮಾನದಲ್ಲಿ ಒಟ್ಟು 173 ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು. ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಉಂಟಾದ ಬೆಂಕಿ ಮತ್ತು ಹೊಗೆ ವಿಮಾನದ ಸುತ್ತಲೂ ಆವರಿಸಿತ್ತು. ತಕ್ಷಣವೇ ತುರ್ತು ಸ್ಥಿತಿಯನ್ನು ಘೋಷಿಸಿದ ಸಿಬ್ಬಂದಿ, ಎಲ್ಲಾ ಪ್ರಯಾಣಿಕರನ್ನು ಎಮರ್ಜೆನ್ಸಿ ಚ್ಯೂಟ್‌ಗಳ ಮೂಲಕ ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದರು. ಈ ವೇಳೆ ಒಬ್ಬ ವ್ಯಕ್ತಿಗೆ ಮಾತ್ರ ಸಣ್ಣ ಪುಟ್ಟ ಗಾಯವಾಗಿದೆ ಎನ್ನಲಾಗಿದೆ.
ರನ್‌ವೇ ಮೇಲೆ ಬೆಂಕಿ ತಗಲಿದ ಲ್ಯಾಂಡಿಂಗ್ ಗೇರ್
ವಿಮಾನವು ಸ್ಥಳೀಯ ಸಮಯ ಮಧ್ಯಾಹ್ನ 2:45ರ ವೇಳೆಗೆ ಡೆನ್ವರ್‌ನಿಂದ ಹೊರಡುವಾಗ ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿತು. ಟೈರ್ ನಿರ್ವಹಣಾ ಸಮಸ್ಯೆಯಿಂದ ಈ ತುರ್ತು ಪರಿಸ್ಥಿತಿ ಉಂಟಾಗಿ, ಟೇಕ್ ಆಫ್ ಅನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ನಂತರ ವಿಮಾನದ ಗಾಲಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ನಿಲ್ದಾಣ ಸಿಬ್ಬಂದಿ ತಕ್ಷಣ ಅಗ್ನಿಶಾಮಕದೊಂದಿಗೆ ಹೊಡೆದೊತ್ತಿ ನಿಯಂತ್ರಣಕ್ಕೆ ತಂದರು.
ಪ್ರಶಸ್ತ ತನಿಖೆಗೆ ಎಫ್‌ಎಎ ಸೂಚನೆ
ಅಮೆರಿಕದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ (FAA) ಘಟನೆಯ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿದ್ದು, ವಿಮಾನದಲ್ಲಿ ಉಂಟಾದ ದೋಷದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ. ವಿಮಾನದಲ್ಲಿ ಸಂಭವಿಸಿದ ತಾಂತ್ರಿಕ ದೋಷ ಏನೆಂಬುದನ್ನು ಗುರುತಿಸಿ, ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣದ ಕ್ರಮ ಕೈಗೊಳ್ಳಲಾಗುವುದು ಎಂದಿದೆ.
