
ರಾಯಚೂರು: ನಗರದ ಜಲಾಲನಗರದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸ್ ತನಿಖೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆಗೈದ ಬಳಿಕ ಪತಿ ವಿಷ್ಣು ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಜಲಾಲನಗರದ ನಿವಾಸಿ ವಿಷ್ಣು ಎಂಬಾತ ತನ್ನ ಪತ್ನಿ ಅರುಣ (36) ಹಾಗೂ ಮಕ್ಕಳಾದ ಶ್ಲೋಕ (10) ಮತ್ತು ಖುಷಿ (7) ಅವರನ್ನು ಹತ್ಯೆಗೈದ ಆರೋಪ ಎದುರಿಸುತ್ತಿದ್ದಾನೆ. ಬಳಿಕ ನವೆಂಬರ್ 1ರಂದು ಚಿಕ್ಕಸುಗೂರು ರೈಲ್ವೆ ನಿಲ್ದಾಣದ ಸಮೀಪ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
₹2 ಕೋಟಿಗೂ ಅಧಿಕ ನಷ್ಟದಿಂದ ಕಂಗೆಟ್ಟಿದ್ದ ವಿಷ್ಣು!
ವಿಷ್ಣು ತೆಲಂಗಾಣದ ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಈ ವ್ಯವಹಾರದಲ್ಲಿ ಬರೋಬ್ಬರಿ ₹2 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದ. ಕಳೆದ ಮೂರು ವರ್ಷಗಳ ಹಿಂದೆ ರಾಯಚೂರಿಗೆ ಮರಳಿದ್ದ ವಿಷ್ಣು, ನಗರದ ಎಪಿಎಂಸಿ ಪ್ರದೇಶದ ದಲ್ಲಾಳಿ ಅಂಗಡಿಯೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.
ವ್ಯವಹಾರದಲ್ಲಿ ಕಳೆದುಕೊಂಡ ಹಣವನ್ನು ಮರಳಿ ನೀಡುವಂತೆ ಹಣ ಕೊಟ್ಟವರು ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಇದರಿಂದ ವಿಷ್ಣು ತೀವ್ರ ಮಾನಸಿಕ ಹಿಂಸೆಗೆ ಒಳಗಾಗಿದ್ದ ಎನ್ನಲಾಗಿದೆ. ಸಾಲಗಾರರ ಒತ್ತಡವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ನಿಖರ ಕಾರಣ ತನಿಖೆಯಿಂದಲೇ ತಿಳಿದುಬರಬೇಕಿದೆ.
ಅಕ್ಟೋಬರ್ 31ರ ರಾತ್ರಿ ನಡೆದಿದ್ದೇನು?
ಅಕ್ಟೋಬರ್ 31ರ ರಾತ್ರಿ ವಿಷ್ಣು ಮನೆಗೆ ಬಿರಿಯಾನಿ ಊಟ ತಂದು ಪತ್ನಿ ಹಾಗೂ ಮಕ್ಕಳಿಗೆ ಊಟ ಮಾಡಿಸಿದ್ದಾನೆ. ಬಳಿಕ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮರುದಿನ ನವೆಂಬರ್ 1ರಂದು ಚಿಕ್ಕಸುಗೂರು ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗೆ ಬಿದ್ದು ತನ್ನ ಜೀವವನ್ನೂ ಅಂತ್ಯಗೊಳಿಸಿಕೊಂಡಿದ್ದಾನೆ.
ಇನ್ನು, ವಿಷ್ಣುವಿನ ಹಿರಿಯ ಮಗ ಸುಹಾಸ್ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಘಟನೆ ನಡೆದ ರಾತ್ರಿ ಊಟ ಮಾಡಿರಲಿಲ್ಲ ಎನ್ನಲಾಗಿದೆ. ಆತ ಪ್ರತ್ಯೇಕ ಕೊಠಡಿಯಲ್ಲಿ ವಾಸವಾಗಿದ್ದರಿಂದ ಈ ಭೀಕರ ಘಟನೆಯಿಂದ ಪಾರಾಗಿದ್ದಾನೆ. ಬೆಳಗ್ಗೆ ತಂದೆ ವಿಷ್ಣು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿರುವುದಾಗಿ ಹೇಳಿ ಹೊರಟಿದ್ದ ಎಂಬ ಮಾಹಿತಿಯನ್ನು ಸುಹಾಸ್ ಪೊಲೀಸರಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಒಂದೆಡೆ ಕೋಟ್ಯಂತರ ರೂಪಾಯಿ ನಷ್ಟ, ಮತ್ತೊಂದೆಡೆ ಸಾಲಗಾರರ ಒತ್ತಡ—ಇವೆಲ್ಲದರ ನಡುವೆ ವಿಷ್ಣು ಇಂತಹ ಘೋರ ನಿರ್ಧಾರ ಕೈಗೊಂಡಿದ್ದಾನೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ನಾಲ್ವರ ಸಾವಿನಿಂದ ರಾಯಚೂರು ನಗರದಲ್ಲಿ ತೀವ್ರ ಆಘಾತ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ.






