ಪದೇಪದೇ ಅಪಘಾತ ಸಂಭವಿಸುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ; 15ರಿಂದ 30 ದಿನಗಳಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸುವ ಭರವಸೆ

ಧಾರವಾಡ: ನಗರದ ಪ್ರತಿಷ್ಠಿತ ಜೆಎಸ್ಎಸ್ ಕಾಲೇಜಿನ ಮುಂಭಾಗದಲ್ಲಿ ಚಿಗರಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿಯೊಬ್ಬಳು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳದಲ್ಲಿ ಸ್ಕೈವಾಕ್ ನಿರ್ಮಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಶುಕ್ರವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ವಡವಡಗಿ ಅವರಿಗೆ ಚಿಗರಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯರ ನೆರವಿನಿಂದ ತಕ್ಷಣ ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆಯಿಂದ ಆಕ್ರೋಶಗೊಂಡ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಜೆಎಸ್ಎಸ್ ಕಾಲೇಜಿನ ಮುಂಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಲೇಜಿನ ಸಮೀಪವಿರುವ ಈ ವೃತ್ತದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ದಾಟುತ್ತಾರೆ. ಆದರೆ, ವೇಗವಾಗಿ ಸಂಚರಿಸುವ ಚಿಗರಿ ಬಸ್‌ಗಳಿಂದಾಗಿ ರಸ್ತೆ ದಾಟುವುದು ಅಪಾಯಕಾರಿಯಾಗಿದೆ. ಈ ಹಿಂದೆ ಚಿಗರಿ ಬಸ್‌ವೊಂದು ಕಾಲೇಜಿನ ಆವರಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಘಟನೆಯೂ ನಡೆದಿತ್ತು. ಹೀಗಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪಘಾತಗಳನ್ನು ತಡೆಗಟ್ಟಲು ಕಾಲೇಜಿನ ಮುಂಭಾಗದಲ್ಲಿ ಸ್ಕೈವಾಕ್ ನಿರ್ಮಿಸಬೇಕು ಹಾಗೂ ವಾಹನಗಳ ವೇಗ ನಿಯಂತ್ರಣಕ್ಕೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯ ಮಾಹಿತಿ ತಿಳಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಮುಂದಿನ 15ರಿಂದ 30 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಳಿಕ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದರು. ಇದರಿಂದಾಗಿ ಬಿಆರ್‌ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್‌ಗಳ ಸಂಚಾರ ಮತ್ತೆ ಸುಗಮಗೊಂಡಿತು.

ವರದಿ: ಶಿವು ಪಿ.ಆರ್.

Related News

error: Content is protected !!