ಬೀದರ್: ಭಾಲ್ಕಿ ತಾಲೂಕಿನ ಹಾಲಗೋಟಾ ಗ್ರಾಮದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಬಳಿಕ ಬಂಧನಕ್ಕೊಳಗಾಗಿ, ನಂತರ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿದ್ದ ಆರೋಪಿ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಜುಲೈ 11ರಂದು ಅನಿತಾ (32) ಎಂಬ ಮಹಿಳೆಯ ಮೇಲೆ ಕೈಲಾಶ್ ಎಂಬಾತ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಲ್ಲೇ ಹತ್ಯೆಗೈದಿದ್ದ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಖಟಕ್‌ಚಿಂಚೋಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ಅದೇ ರಾತ್ರಿ ಆರೋಪಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದು, ಈ ಘಟನೆ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.

ಆರೋಪಿಯನ್ನು ಪತ್ತೆಹಚ್ಚಲು ಬೀದರ್ ಜಿಲ್ಲಾ ಪೊಲೀಸರು ವಿಶೇಷ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಭಾಲ್ಕಿ ತಾಲೂಕಿನ ತಳವಾಡ ಗ್ರಾಮದ ಜಮೀನೊಂದರಲ್ಲಿ ಅಡಗಿ ಕುಳಿತಿದ್ದ ಕೈಲಾಶ್‌ನನ್ನು ಪೊಲೀಸರು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಪೊಲೀಸ್ ವಶದಿಂದ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಮೃತ ಅನಿತಾ ಅವರ ಕುಟುಂಬಸ್ಥರು ವಿಡಿಯೊ ಬಿಡುಗಡೆ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಆಗ್ರಹಿಸಿದ್ದರು. ಇದೀಗ ಆರೋಪಿಯ ಮರುಬಂಧನದಿಂದ ಪ್ರಕರಣದ ತನಿಖೆ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Related News

error: Content is protected !!