ದೆಹಲಿಯ ನೈಋತ್ಯ ಭಾಗದ ಬಿಂದಾಪುರದಲ್ಲಿ ಬೈಕ್ ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಜಗಳ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ನೆರೆಹೊರೆಯವರೊಂದಿಗೆ ಉಂಟಾದ ವಾಗ್ವಾದದ ವೇಳೆ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಪತಿಗೆ ಗಂಭೀರ ಗಾಯಗಳಾಗಿವೆ.
ಆರ್ತಿ (32) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅವರ ಪತಿ ವಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದು, ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ ಮಧ್ಯಾಹ್ನ ಸುಮಾರು 2:50ರ ವೇಳೆಗೆ ಬಿಂದಾಪುರ ಪೊಲೀಸ್ ಠಾಣೆಗೆ ಕರೆ ಬಂದಿದ್ದು, ಕೆಲ ಯುವಕರು ತನ್ನ ಮಗಳು ಹಾಗೂ ಅಳಿಯನ ಮೇಲೆ ಚಾಕು ದಾಳಿ ನಡೆಸಿರುವುದಾಗಿ ಆರ್ತಿ ಪೋಷಕರು ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆಗಲೇ ಗಾಯಾಳುಗಳನ್ನು ದೀನದಯಾಳ ಉಪಾಧ್ಯಾಯ (ಡಿಡಿಯು) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಆರ್ತಿಯನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ರಸ್ತೆಯಲ್ಲಿ ಬೈಕ್ ಪಾರ್ಕಿಂಗ್ ವಿಚಾರವಾಗಿ ದಂಪತಿ ಹಾಗೂ ನೆರೆಹೊರೆಯವರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅದು ಹಿಂಸಾತ್ಮಕ ತಿರುವು ಪಡೆದಿದೆ ಎಂದು ತಿಳಿದುಬಂದಿದೆ. ಆರೋಪಿಗಳು ಚಾಕುವಿನಿಂದ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ಪಪ್ಪು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಅಪ್ರಾಪ್ತ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಬಿಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
