ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪಿಕೆಪಿಎಸ್) ನಡೆಸುತ್ತಿರುವ ರಸಗೊಬ್ಬರ ಅಂಗಡಿಯಲ್ಲಿ ಯೂರಿಯಾ ಗೊಬ್ಬರ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರೈತರು ಅಂಗಡಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಆರೋಪದ ಪ್ರಕಾರ, ಯೂರಿಯಾ ರಸಗೊಬ್ಬರ ಖರೀದಿಸಲು ಬಂದ ರೈತರಿಗೆ ಕಡ್ಡಾಯವಾಗಿ ನ್ಯಾನೋ ಯೂರಿಯಾವನ್ನೂ ಖರೀದಿಸುವಂತೆ ಒತ್ತಾಯಿಸಲಾಗುತ್ತಿತ್ತು. ನ್ಯಾನೋ ಯೂರಿಯಾ ಖರೀದಿಸದಿದ್ದರೆ ಯೂರಿಯಾ ಗೊಬ್ಬರ ನೀಡುವುದಿಲ್ಲ ಎಂದು ಅಂಗಡಿ ಸಿಬ್ಬಂದಿ ಹೇಳುತ್ತಿದ್ದರು ಎನ್ನಲಾಗಿದೆ.

ಇದರ ಜೊತೆಗೆ, ಬಿಲ್‌ನಲ್ಲಿ “VEG SEEDS” ಎಂದು ನಮೂದಿಸಿ ಯಾವುದೇ ವಸ್ತು ನೀಡದೇ ಹೆಚ್ಚುವರಿಯಾಗಿ ₹102 ವಸೂಲಿ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಕುರಿತು ಕೃಷಿ ಇಲಾಖೆಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಮೋಹನ ಪ್ರಭು ಬಿರಾದಾರ ಹಾಗೂ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ, ಒಂದು ಚೀಲ ಯೂರಿಯಾ ಗೊಬ್ಬರದ ಸರ್ಕಾರ ನಿಗದಿಪಡಿಸಿದ ಬೆಲೆ ₹266 ಆಗಿದ್ದರೂ, ಅಂಗಡಿಯಲ್ಲಿ ₹300 ವಸೂಲಿ ಮಾಡಿರುವುದು ಹಾಗೂ ರೈತರ ಇಚ್ಛೆಗೆ ವಿರುದ್ಧವಾಗಿ ನ್ಯಾನೋ ಯೂರಿಯಾ ಮಾರಾಟ ಮಾಡಿರುವುದು ಬಿಲ್‌ಗಳು ಮತ್ತು ರೈತರ ಹೇಳಿಕೆಗಳಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿದ್ದು, ಮೂರು ದಿನಗಳೊಳಗೆ ಸಮರ್ಪಕ ಉತ್ತರ ನೀಡುವಂತೆ ಸೂಚಿಸಲಾಗಿದೆ. ತೃಪ್ತಿಕರ ಉತ್ತರ ದೊರೆಯದಿದ್ದಲ್ಲಿ ಕಾನೂನು ಕ್ರಮ ಕೈಗೊಂಡು ರಸಗೊಬ್ಬರ ಮಾರಾಟ ಪರವಾನಗಿಯನ್ನು ಅಮಾನತುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.

ವರದಿ: ಸಂಗಪ್ಪ ಚಲವಾದಿ

Related News

error: Content is protected !!