Categories: Latest

ರಾತ್ರಿ 3 ಗಂಟೆಗೂ ಆಟೋ ಓಡಿಸುವ ಮಹಿಳೆ; ಹಣಕ್ಕಾಗಿ ಅಲ್ಲ, ಕಾರಣ ಕೇಳಿದ್ರೆ ಸಲಾಂ ಹೊಡೆಯುತ್ತೀರಾ!

ವಡೋದರಾ: ಸಾಮಾನ್ಯವಾಗಿ ಮುಂಜಾನೆ 3 ಗಂಟೆ ಎಂದರೆ ಬಹುತೇಕರು ಗಾಢ ನಿದ್ರೆಯಲ್ಲಿರುವ ಸಮಯ. ರಸ್ತೆಗಳು ಕೂಡ ನಿರ್ಜನವಾಗಿರುತ್ತವೆ. ಆದರೆ ಗುಜರಾತ್‌ನ ವಡೋದರಾದ ಈ ಮಹಿಳೆ ಮಾತ್ರ ಆ ಹೊತ್ತಿನಲ್ಲೂ ಆಟೋ ಓಡಿಸುತ್ತಾ ರಸ್ತೆಯಲ್ಲಿರುತ್ತಾರೆ. ಅವರ ಈ ಕೆಲಸದ ಹಿಂದಿರುವ ಕಾರಣ ತಿಳಿದರೆ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.

ಇತ್ತೀಚೆಗೆ ಸನ್ಯಮ್ ಗಾರ್ಗ್ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರು ಮುಂಜಾನೆ 3 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಆಟೋ ಓಡಿಸುತ್ತಿರುವುದನ್ನು ಗಮನಿಸಿದ್ದಾರೆ. ಕುತೂಹಲದಿಂದ ಅವರೊಂದಿಗೆ ಮಾತನಾಡಿದಾಗ, ಈ ಮಹಿಳೆಯ ಸೇವಾ ಮನೋಭಾವದ ಬಗ್ಗೆ ಹಲವು ವಿಚಾರಗಳು ತಿಳಿದುಬಂದಿವೆ.

ಪತಿಯೇ ಆಟೋ ಚಾಲನೆ ಕಲಿಸಿದ್ರು

ಈ ಮಹಿಳೆಯ ಪತಿಯೂ ಆಟೋ ಚಾಲಕರಾಗಿದ್ದಾರೆ. ಪತ್ನಿ ಯಾರ ಮೇಲೂ ಅವಲಂಬಿತರಾಗದೆ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಪತಿಯೇ ಅವರಿಗೆ ಆಟೋ ಚಾಲನೆ ಕಲಿಸಿದ್ದಾರೆ. ಇದೀಗ ದಂಪತಿ ಇಬ್ಬರೂ ಕಷ್ಟಪಟ್ಟು ದುಡಿಯುತ್ತಾ ತಮ್ಮ ಇಬ್ಬರು ಮಕ್ಕಳ ಭವಿಷ್ಯ ಕಟ್ಟುತ್ತಿದ್ದಾರೆ.

ಆದರೆ ಈ ಮಹಿಳೆಯ ಆಟೋ ಚಾಲನೆಯ ಉದ್ದೇಶ ಕೇವಲ ಹಣ ಸಂಪಾದಿಸುವುದಲ್ಲ ಎಂಬುದು ವಿಶೇಷ.

ಗರ್ಭಿಣಿಯರು, ರೋಗಿಗಳು ಮತ್ತು ಒಂಟಿ ಮಹಿಳೆಯರಿಗೆ ಉಚಿತ ಸೇವೆ!

ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಾದಾಗ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ರೋಗಿಗಳಿಗೆ ವಾಹನ ಸಿಗುವುದು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಅರಿತಿರುವ ಮಹಿಳಾ ಆಟೋ ಚಾಲಕಿ, ತಡರಾತ್ರಿಯಲ್ಲೂ ಅಗತ್ಯವಿರುವವರಿಗೆ ನೆರವಾಗಲು ಮುಂದಾಗುತ್ತಾರೆ.

ವಿಶೇಷವಾಗಿ ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಆಸ್ಪತ್ರೆಗೆ ತೆರಳಬೇಕಾದ ಸಂದರ್ಭದಲ್ಲಿ ಅವರಿಂದ ಹಣ ಪಡೆಯದೆ ಉಚಿತವಾಗಿ ಆಟೋ ಸೇವೆ ನೀಡುತ್ತಾರೆ ಎನ್ನಲಾಗಿದೆ.

ಪ್ರಯಾಣಿಕರು ಹಣ ನೀಡಲು ಮುಂದಾದರೂ, ತುರ್ತು ಪರಿಸ್ಥಿತಿಯಲ್ಲಿರುವವರಿಂದ ಹಣ ಪಡೆಯಲು ಅವರು ನಿರಾಕರಿಸುತ್ತಾರೆ.

“ಹಣ ಸಂಪಾದನೆ ಮಾತ್ರ ನನ್ನ ಗುರಿಯಲ್ಲ”

“ಕೇವಲ ಹಣ ಸಂಪಾದಿಸುವುದಷ್ಟೇ ನನ್ನ ಗುರಿಯಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ವಿಶೇಷವಾಗಿ ಮಹಿಳೆಯರಿಗೆ ರಾತ್ರಿ ಸಮಯದಲ್ಲೂ ಸುರಕ್ಷಿತವಾಗಿ ಪ್ರಯಾಣಿಸುವ ಭರವಸೆ ಮೂಡಿಸಬೇಕು” ಎಂಬುದು ಅವರ ಆಶಯ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ

ಸನ್ಯಮ್ ಗಾರ್ಗ್ ಅವರು ಹಂಚಿಕೊಂಡಿರುವ ಈ ಮಹಿಳೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಮಾನವೀಯತೆ ಮತ್ತು ಸೇವಾ ಮನೋಭಾವಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಾತ್ರಿ 3 ಗಂಟೆಯಲ್ಲೂ ಸ್ವಾರ್ಥವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ಈ ಮಹಿಳೆ, ನಿಜಕ್ಕೂ ಸಮಾಜದ ‘ರಿಯಲ್ ಹೀರೋ’ ಎಂದು ಹಲವರು ಕೊಂಡಾಡುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

10 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

15 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago

ಕಲಬುರಗಿಯಲ್ಲಿ ಜೆಸ್ಕಾಂ AEE ರಾಜೇಶ್ವರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…

2 days ago