ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯಲ್ಲೂ ಅದೇ ಮಾದರಿಯ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಮಹಿಳೆ, ಆಕೆಯ ಪತಿ ಹಾಗೂ ಸಹೋದರ ಸೇರಿ ಹತ್ಯೆಗೈದು, ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.

ಮೃತನನ್ನು ಬಸವನಗೌಡ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಂಬಂಧಿಕಳಾದ ಶ್ವೇತಾ, ಆಕೆಯ ಪತಿ ದೊಡ್ಡ ಬಸವನಗೌಡ ಹಾಗೂ ಶ್ವೇತಾಳ ಸಹೋದರ ವಿಜಯ್ ಅವರನ್ನು ಮೋಕಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೂನ್ 7ರಂದು ರಾತ್ರಿ ಈ ಕೃತ್ಯ ನಡೆದಿದ್ದು, ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಪೊಲೀಸರ ಮಾಹಿತಿ ಪ್ರಕಾರ, ಎರಡು ವರ್ಷಗಳ ಹಿಂದೆ ನಡೆದ ಮದುವೆ ಸಮಾರಂಭವೊಂದರಲ್ಲಿ ಬಸವನಗೌಡ ಮತ್ತು ಶ್ವೇತಾ ಪರಿಚಯವಾಗಿದ್ದರು. ಸಂಬಂಧದಲ್ಲಿ ಅತ್ತಿಗೆಯಾಗಬೇಕಿದ್ದ ಶ್ವೇತಾಳಿಗೆ ಬಸವನಗೌಡ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಆತ ತನ್ನ ವರ್ತನೆಯನ್ನು ಬದಲಿಸಿಕೊಳ್ಳದೆ ಕಿರುಕುಳ ಮುಂದುವರಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಕಿರುಕುಳದಿಂದ ಬೇಸತ್ತ ಶ್ವೇತಾ, ವಿಷಯವನ್ನು ತನ್ನ ಪತಿ ಮತ್ತು ಸಹೋದರನಿಗೆ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಮೂವರೂ ಸೇರಿ ಬಸವನಗೌಡನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಯೋಜನೆಯಂತೆ ಜೂನ್ 7ರ ರಾತ್ರಿ ಶ್ವೇತಾ ತನ್ನ ಮೊಬೈಲ್‌ನಿಂದ ಬಸವನಗೌಡನಿಗೆ ಕರೆ ಮಾಡಿ ನಿರ್ದಿಷ್ಟ ಸ್ಥಳಕ್ಕೆ ಬರುವಂತೆ ಹೇಳಿದ್ದಾಳೆ.

ಶ್ವೇತಾ ಸೂಚಿಸಿದ ಸ್ಥಳಕ್ಕೆ ಬಂದ ಬಸವನಗೌಡನ ಮೇಲೆ ಹೊಂಚು ಹಾಕಿ ಕುಳಿತಿದ್ದ ದೊಡ್ಡ ಬಸವನಗೌಡ ಮತ್ತು ವಿಜಯ್ ದಾಳಿ ನಡೆಸಿದ್ದಾರೆ. ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಆರೋಪಿಗಳು ಶವವನ್ನು ಎಲ್‌ಎಲ್‌ಸಿ ಕಾಲುವೆ ಸಮೀಪದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.

ಕೆಲವು ದಿನಗಳ ಬಳಿಕ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿಯ ಮೇರೆಗೆ ಮೋಕಾ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತನ ಮೊಬೈಲ್ ಕರೆಗಳ ವಿವರ (CDR) ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಶ್ವೇತಾ ಮತ್ತು ಆಕೆಯ ಕುಟುಂಬ ಸದಸ್ಯರ ಮೇಲೆ ಅನುಮಾನ ವ್ಯಕ್ತವಾಗಿತ್ತು.

ಪೊಲೀಸರ ತೀವ್ರ ವಿಚಾರಣೆಯಲ್ಲಿ ಮೂವರೂ ಕೃತ್ಯವನ್ನು ಒಪ್ಪಿಕೊಂಡಿದ್ದು, ಸದ್ಯ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಮೋಕಾ ಠಾಣೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!