ಸಿದ್ದಾಪುರ: ತಾಲೂಕಿನ ಹಾಳದಕಟ್ಟಾ ಪ್ರದೇಶದಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿ ಕತ್ತಿ ತೋರಿಸಿ ಬೆದರಿಕೆ ಹಾಕಿ, ಸುಮಾರು ₹3 ಲಕ್ಷ ಮೌಲ್ಯದ ಬಂಗಾರದ ತಾಳಿ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ.
ಹಾಳದಕಟ್ಟಾದ ಸೊರಬ ರಸ್ತೆಯ ಪದ್ಮರಾಜ್ ವಿಲ್ಲಾ ನಿವಾಸಿ ಪೂನಂ ಗಣಪತಿ ಶೇಟ್ (42) ಅವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 22ರಂದು ಸಂಜೆ ಸುಮಾರು 4.22 ಗಂಟೆಗೆ ಕತ್ತಿ ಹಿಡಿದು ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ, ಮಹಿಳೆಗೆ ಬಂಗಾರ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಮನೆಯಿಂದ ಹೊರಬರಲು ಯತ್ನಿಸಿದಾಗ, ಆರೋಪಿಯು ಅವರ ಕುತ್ತಿಗೆಯಲ್ಲಿದ್ದ ತಾಳಿ ಸರವನ್ನು ಬಲವಂತವಾಗಿ ಎಳೆದಿದ್ದಾನೆ. ಪರಿಣಾಮ ಸರ ತುಂಡಾಗಿ, ಸುಮಾರು 20.5 ಗ್ರಾಂ ತೂಕದ ಬಂಗಾರದ ಆಭರಣಗಳು ಆರೋಪಿಯ ಕೈಗೆ ಸಿಕ್ಕಿದ್ದು, ಅವುಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಮಹಿಳೆಯ ಕುತ್ತಿಗೆಗೆ ಗಾಯವಾಗಿದ್ದು, ಕಳವಾಗಿರುವ ಬಂಗಾರದ ಆಭರಣಗಳ ಮೌಲ್ಯ ಸುಮಾರು ₹3 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕಾರವಾರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ಸಿದ್ದಾಪುರ ಪಿಎಸ್ಐ ಶಾಂತಿನಾಥ ಕೆ.ಪಾಸಾನೆ, ಕಾರವಾರ ಪೊಲೀಸ್ ಕಚೇರಿಯಿಂದ ಸೋಕೋ ಅಧಿಕಾರಿಗಳು, ಬೆರಳು ಮುದ್ರೆ ಘಟಕದ ಅಧಿಕಾರಿಗಳು, ಶ್ವಾನ ದಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಮುಂದುವರೆದಿದೆ.
