
ಗೌರಿಬಿದನೂರು: ತಾಲೂಕಿನ ಬೈಚಾಪುರ ರಸ್ತೆಯ ಪಕ್ಕದಲ್ಲಿ 27 ವರ್ಷದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಎರಡು ವರ್ಷದ ಮಗುವಿನ ತಂದೆಯಾಗಿದ್ದ ಯುವಕನ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸುವಂತೆ ಪತ್ನಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮೃತ ಯುವಕನನ್ನು ಮಧುಗಿರಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಅಶ್ವಥ್ (27) ಎಂದು ಗುರುತಿಸಲಾಗಿದೆ. ಭಾನುವಾರ ಇಎಂಐ ಪಾವತಿಸುವ ಸಲುವಾಗಿ ಮನೆಯಿಂದ 3 ಸಾವಿರ ರೂಪಾಯಿ ಹಣ ತೆಗೆದುಕೊಂಡು ಹೊರಟಿದ್ದ ಅಶ್ವಥ್, ನಂತರ ಮನೆಗೆ ವಾಪಸಾಗಿರಲಿಲ್ಲ ಎನ್ನಲಾಗಿದೆ.
ಸೋಮವಾರ ಪತ್ನಿ ಪ್ರಿಯಾಂಕ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ, ಕೆಲಸದ ನಿಮಿತ್ತ ಹೊರಗಿದ್ದು, ಕೆಲಸ ಮುಗಿಸಿಕೊಂಡು ಬರುವುದಾಗಿ ಅಶ್ವಥ್ ತಿಳಿಸಿದ್ದ ಎನ್ನಲಾಗಿದೆ. ಈ ವೇಳೆ ಪತ್ನಿ ತಾನು ಆಂಧ್ರಪ್ರದೇಶದ ಮನಪಲ್ಲಿ ಪ್ರದೇಶದಲ್ಲಿರುವ ತಾಯಿಯ ಮನೆಗೆ ತೆರಳಿರುವುದಾಗಿ ಹೇಳಿದ್ದು, ಕೆಲಸ ಮುಗಿದ ಬಳಿಕ ಅಲ್ಲಿಗೆ ಬರುವುದಾಗಿ ಅಶ್ವಥ್ ತಿಳಿಸಿದ್ದ ಎನ್ನಲಾಗಿದೆ.
ಆದರೆ ಮಂಗಳವಾರ ಮಧ್ಯಾಹ್ನ ಗೌರಿಬಿದನೂರು ತಾಲೂಕಿನ ಬೈಚಾಪುರ ರಸ್ತೆಯ ಪಕ್ಕದಲ್ಲಿ ಅಶ್ವಥ್ ಅವರ ಮೃತದೇಹ ಪತ್ತೆಯಾಗಿದೆ. ಯುವಕನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪತ್ನಿ ಪ್ರಿಯಾಂಕ ಅವರ ಆಕ್ರಂದನ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.
ಈ ಕುರಿತು ಮಾತನಾಡಿದ ಪತ್ನಿ ಪ್ರಿಯಾಂಕ, “ನಮ್ಮ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ನನ್ನ ಪತಿಯ ಬಳಿ ಹಣವಿದ್ದಾಗ ಅವರ ಅಣ್ಣಂದಿರು ಅವರನ್ನು ಮದ್ಯಪಾನ ಮಾಡಲು ಪ್ರೇರೇಪಿಸಿ ಕುಡಿಸಿ ಮನೆಗೆ ಕಳುಹಿಸುತ್ತಿದ್ದರು. ಅವರು ಯಾವಾಗಲೂ ನನ್ನ ಪತಿಯ ಜೊತೆಯಲ್ಲೇ ಇರುತ್ತಿದ್ದರು. ನನ್ನ ಪತಿಯ ಸಾವಿನ ಹಿಂದೆ ಅವರ ಕೈವಾಡವಿರಬಹುದೆಂಬ ಅನುಮಾನವಿದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಸಾವಿನ ಹಿಂದಿರುವ ಸತ್ಯವನ್ನು ಬಯಲಿಗೆಳೆದು ನಮಗೆ ನ್ಯಾಯ ಒದಗಿಸಬೇಕು” ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಮೃತ ಅಶ್ವಥ್ಗೆ ಪತ್ನಿ ಹಾಗೂ ಕೇವಲ ಎರಡು ವರ್ಷದ ಮಗು ಇದ್ದು, ಕುಟುಂಬದ ಆಧಾರವಾಗಿದ್ದ ಯುವಕನನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯಿಂದಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
ಎರಡು ವರ್ಷದ ಮಗುವಿನ ತಂದೆಯ ಅನುಮಾನಾಸ್ಪದ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪತ್ನಿ ವ್ಯಕ್ತಪಡಿಸಿರುವ ಅನುಮಾನಗಳ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಹೊರತಂದು ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ವರದಿ: ಅವಿನಾಶ್, ಗೌರಿಬಿದನೂರು
ಚಿಕ್ಕಬಳ್ಳಾಪುರ ಜಿಲ್ಲೆ






