ಕೊಪ್ಪಳ: ಸಾರಿಗೆ ಬಸ್‌ನ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ ಕಳಚಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹೊಲಕ್ಕೆ ನುಗ್ಗಿದ ಘಟನೆ ಜಿಲ್ಲೆಯ ಗಂಗಾನಾಳ ಗ್ರಾಮದ ಸಮೀಪ ನಡೆದಿದೆ. ಚಾಲಕನ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದಾಗಿ ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕನಕಗಿರಿ ಮಾರ್ಗದಿಂದ ಕೊಪ್ಪಳದತ್ತ ಸಂಚರಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬಸ್ ಗಂಗಾನಾಳ ಗ್ರಾಮದ ಸಮೀಪ ತಲುಪುತ್ತಿದ್ದಂತೆ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ ದಿಢೀರನೆ ಕಳಚಿಕೊಂಡಿದೆ. ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದು ಪಕ್ಕದಲ್ಲಿದ್ದ ಹೊಲಕ್ಕೆ ನುಗ್ಗಿದೆ.

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಅದೃಷ್ಟವಶಾತ್ ಬಸ್ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪ್ರಯಾಣಿಕರ ರಕ್ಷಣೆಗೆ ಧಾವಿಸಿದ ಸ್ಥಳೀಯರು

ಬಸ್ ಹೊಲಕ್ಕೆ ನುಗ್ಗಿದ ಘಟನೆ ಗಮನಿಸಿದ ಸ್ಥಳೀಯ ನಿವಾಸಿಗಳು ಹಾಗೂ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ನೆರವಾಗಿದ್ದಾರೆ.

ಚಕ್ರದ ತಾಂತ್ರಿಕ ದೋಷ ಕಾಣಿಸಿಕೊಂಡ ಸಂದರ್ಭದಲ್ಲಿ ಚಾಲಕ ತೋರಿದ ಸಮಯಪ್ರಜ್ಞೆ ಹಾಗೂ ವಾಹನದ ವೇಗವನ್ನು ನಿಯಂತ್ರಿಸುವಲ್ಲಿ ವಹಿಸಿದ ಎಚ್ಚರಿಕೆಯಿಂದಲೇ ದೊಡ್ಡ ಅನಾಹುತ ತಪ್ಪಿದೆ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ: ಶಿವು ಪಿ.ಆರ್.

Related News

error: Content is protected !!