
ಭಟ್ಕಳ: ಸಾಲ ಪಡೆದ ಹಣವನ್ನು ಮರುಪಾವತಿಸದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿರಸಿ ಮೂಲದ ರವೀಶ ವೆಂಕಟ್ರಮಣ ಹೆಗಡೆ ಅವರನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಭಟ್ಕಳದ ಈಶ್ವರ ಹೊನ್ನಪ್ಪ ನಾಯ್ಕ ಅವರಿಂದ ರವೀಶ ಹೆಗಡೆ ಅವರು ಕೈಗಡ ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲದ ಹಣವನ್ನು ಹಿಂದಿರುಗಿಸುವ ಉದ್ದೇಶದಿಂದ ಚೆಕ್ ನೀಡಿದ್ದರು. ಆದರೆ ಚೆಕ್ ಅನ್ನು ಬ್ಯಾಂಕ್‌ಗೆ ಜಮಾ ಮಾಡಿದ ಸಂದರ್ಭದಲ್ಲಿ ಅದು ಅಮಾನ್ಯಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚೆಕ್ ಅಮಾನ್ಯಗೊಂಡ ಬಳಿಕ ಸಾಲದ ಹಣವನ್ನು ಪಾವತಿಸುವಂತೆ ಈಶ್ವರ ನಾಯ್ಕ ಅವರು ರವೀಶ ಹೆಗಡೆ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಿಂದ ರವೀಶ ಹೆಗಡೆ ಅವರ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ವಾರೆಂಟ್ ಜಾರಿಯಾದ ನಂತರವೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಭಟ್ಕಳ ಪೊಲೀಸರು ಶಿರಸಿಯಲ್ಲಿರುವ ರವೀಶ ಹೆಗಡೆ ಅವರ ನಿವಾಸಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಇನ್ನು ಆತ್ಮಹತ್ಯೆ ಪ್ರಕರಣ ಹಾಗೂ ಕೆಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದ ಕಾರು ಸಾಲ ಪ್ರಕರಣ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ರವೀಶ ಹೆಗಡೆ ಅವರ ಹೆಸರು ಆರೋಪಿಯಾಗಿ ಕೇಳಿಬಂದಿದೆ ಎಂದು ತಿಳಿದುಬಂದಿದೆ. ಆದರೆ ಈ ಪ್ರಕರಣಗಳಲ್ಲಿನ ಆರೋಪಗಳ ಕುರಿತು ಅಂತಿಮ ನಿರ್ಧಾರವಾಗಿಲ್ಲ. ಸಂಬಂಧಿಸಿದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ಮತ್ತು ಕಾನೂನುಬದ್ಧ ಹೊಣೆಗಾರಿಕೆ ನಿರ್ಧಾರವಾಗಲಿದೆ.
ವರದಿ: ಕುಮಾರ್ ನಾಯ್ಕ್






