ಗೌರಿಬಿದನೂರು: ಮುಂಜಾನೆ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದ 25 ವರ್ಷದ ಯುವಕನೊಬ್ಬ ನಾಪತ್ತೆಯಾಗಿದ್ದು, ಮರುದಿನ ಸಂಜೆ ಆತನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಕೊಟ್ಟಪನಹಳ್ಳಿ ಗ್ರಾಮದ ನಿವಾಸಿ ನಂಜುಂಡಪ್ಪ ಅವರ ಪುತ್ರ ಮನೋಜ್ (25) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮಾಲ್ ಆಫ್ ಏಷ್ಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ್, ಸೋಮವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದರು ಎನ್ನಲಾಗಿದೆ.

ಮನೋಜ್ ಮನೆಯಿಂದ ಹೊರಟ ಬಳಿಕ ತಂದೆಗೆ ಅನುಮಾನ ಮೂಡಿದ್ದು, ಕೂಡಲೇ ಮಗನ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಮನೋಜ್ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಸುಮಾರು 11 ಗಂಟೆಯವರೆಗೂ ಕುಟುಂಬಸ್ಥರು ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾರೆ.

ಈ ನಡುವೆ ವಾಟದಹೊಸಹಳ್ಳಿ ಕೆರೆಯ ಸಮೀಪ ಮನೋಜ್ ಅವರ ಮೊಬೈಲ್ ಫೋನ್ ಪತ್ತೆಯಾಗಿತ್ತು. ಸ್ಥಳೀಯ ಕೆಲ ಯುವಕರು ಮೊಬೈಲ್ ಫೋನ್‌ ಅನ್ನು ಸ್ವಿಚ್ ಆನ್ ಮಾಡಿದ ಬಳಿಕ ಕುಟುಂಬಸ್ಥರಿಂದ ಕರೆ ಬಂದಿದ್ದು, ಕೆರೆಯ ಬಳಿ ಮೊಬೈಲ್ ಪತ್ತೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿದ ತಕ್ಷಣ ಮನೋಜ್ ಅವರ ತಂದೆ, ತಾಯಿ ಹಾಗೂ ಅಣ್ಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಪತ್ತೆಯಾದ ಮೊಬೈಲ್ ಫೋನ್ ಹಾಗೂ ಚಪ್ಪಲಿಗಳನ್ನು ನೋಡಿದ ಕುಟುಂಬಸ್ಥರು ಅವು ಮನೋಜ್ ಅವರದ್ದೇ ಎಂದು ಗುರುತಿಸಿದ್ದಾರೆ. ಬಳಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಯುವಕ ಕೆರೆಯಲ್ಲಿ ಬಿದ್ದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ. ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಗೆ ಆಗಮಿಸಿ ಶೋಧ ಕಾರ್ಯ ನಡೆಸಿದರು.

ಸತತ ಶೋಧ ಕಾರ್ಯದ ಬಳಿಕ ಮಂಗಳವಾರ ಸಂಜೆ ವೇಳೆಗೆ ಮನೋಜ್ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಯುವಕ ಕೆರೆಗೆ ಹೇಗೆ ಬಿದ್ದರು? ಇದು ಆಕಸ್ಮಿಕ ಘಟನೆಯೇ ಅಥವಾ ಬೇರೆ ಯಾವುದೇ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮನೋಜ್ ಅವರ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದ್ದು, ಪೊಲೀಸರ ತನಿಖೆಯ ಬಳಿಕವೇ ಘಟನೆಯ ಹಿಂದಿನ ನಿಜಾಂಶ ಹೊರಬರಬೇಕಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವರದಿ: ಅವಿನಾಶ್

Related News

error: Content is protected !!