ಮುಂಬೈನ ಪ್ರಸಿದ್ಧ ಮರೀನ್ ಡ್ರೈವ್‌ನಲ್ಲಿ ಯುವತಿಯೊಬ್ಬಳು ಸಂಜೆಯ ತಂಪಾದ ಗಾಳಿಯನ್ನು ಆಸ್ವಾದಿಸುತ್ತಾ ಕುಳಿತಿದ್ದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ವಿಡಿಯೋದಲ್ಲಿದ್ದ ಯುವತಿಯ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಆಕೆಯ ಗಮನಕ್ಕೆ ಬಂದ ಬಳಿಕ, ಯೂಟ್ಯೂಬರ್ ಒಬ್ಬರು ಮಾನವೀಯತೆ ಮೆರೆದು ವಿಡಿಯೋವನ್ನೇ ಡಿಲೀಟ್ ಮಾಡಿದ್ದಾರೆ.

ಮರೀನ್ ಡ್ರೈವ್‌ನಲ್ಲಿ ಖ್ಯಾತ ಯೂಟ್ಯೂಬರ್ ಸೌರಭ್ ಜೋಶಿ ಅವರೊಂದಿಗೆ ಸ್ಥಳೀಯ ವ್ಲಾಗರ್‌ವೊಬ್ಬರು ವ್ಲಾಗ್ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಹಾರಿಸಲಾಗಿದ್ದ ಡ್ರೋನ್ ಕ್ಯಾಮೆರಾ, ಅಲ್ಲೇ ಕುಳಿತಿದ್ದ ಯುವತಿಯ ಸಮೀಪದಿಂದ ಹಾದುಹೋಗಿದ್ದು, ಆಕೆಯ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿತ್ತು.

ನಂತರ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ವಿಡಿಯೋದಲ್ಲಿದ್ದ ಯುವತಿಯ ದೃಶ್ಯವೂ ಸೇರಿ ಸಂಪೂರ್ಣ ವೀಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೇ ಸಮಯದಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿತ್ತು.

ಆದರೆ, ವಿಡಿಯೋದ ಕೆಲವು ದೃಶ್ಯಗಳು ಯುವತಿಯ ಖಾಸಗಿತನಕ್ಕೆ ಧಕ್ಕೆಯಾಗುವಂತಿದ್ದವು. ಇದನ್ನು ಗಮನಿಸಿದ ಕೆಲ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಅಸಭ್ಯ ಹಾಗೂ ಆಕ್ಷೇಪಾರ್ಹ ರೀತಿಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದರು.

ಈ ವಿಚಾರ ಮರುದಿನ ಯುವತಿಯ ಗಮನಕ್ಕೆ ಬಂದಿದೆ. ಕೂಡಲೇ ಆಕೆ ಸಂಬಂಧಪಟ್ಟ ವ್ಲಾಗರ್‌ನ್ನು ಸಂಪರ್ಕಿಸಿ, ವಿಡಿಯೋದಿಂದ ತಮಗೆ ಉಂಟಾಗುತ್ತಿರುವ ತೊಂದರೆ ಹಾಗೂ ಆಕ್ಷೇಪವನ್ನು ತಿಳಿಸಿದ್ದಾರೆ.

ಯುವತಿಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ವ್ಲಾಗರ್, ಕೊನೆಗೆ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಿಂದಲೇ ತೆಗೆದುಹಾಕಿದ್ದಾರೆ. ವ್ಯೂಸ್, ಲೈಕ್ಸ್‌ಗಿಂತ ವ್ಯಕ್ತಿಯ ಖಾಸಗಿತನ ಮತ್ತು ಗೌರವವೇ ಮುಖ್ಯ ಎಂಬ ನಿಲುವು ತಾಳಿರುವುದಾಗಿ ತಿಳಿದುಬಂದಿದೆ.

ವಿಡಿಯೋ ವೈರಲ್ ಆಗಿದ್ದರೂ, ಯುವತಿಯ ಮನವಿಗೆ ಸ್ಪಂದಿಸಿ ಅದನ್ನು ಡಿಲೀಟ್ ಮಾಡಿದ ಯೂಟ್ಯೂಬರ್‌ನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Related News

error: Content is protected !!