ಶಹಜಹಾನ್‌ಪುರ: ಉತ್ತರ ಪ್ರದೇಶದ ಶಹಜಹಾನ್‌ಪುರ ಮಹಾನಗರ ಪಾಲಿಕೆಯ ಹಲವು ಕಾರ್ಪೊರೇಟರ್‌ಗಳು ಗಂಗಾಜಲವನ್ನು ಕೈಯಲ್ಲಿ ಹಿಡಿದು ಲಂಚದ ಹಣವನ್ನು ತಮ್ಮ ನಡುವೆ ಸಮಾನವಾಗಿ ಹಂಚಿಕೊಳ್ಳುವುದಾಗಿ ಪ್ರಮಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ, ಓರ್ವ ಕಾರ್ಪೊರೇಟರ್ ಗಂಗಾಜಲವಿರುವ ಪಾತ್ರೆಯನ್ನು ಹಿಡಿದು ಪ್ರಮಾಣ ಮಾಡುತ್ತಿರುವುದು ಕಂಡುಬಂದಿದೆ. ಪಾಲಿಕೆಗೆ ಬರುವ ಲಂಚದ ಹಣವನ್ನು ಎಲ್ಲಾ 60 ಕಾರ್ಪೊರೇಟರ್‌ಗಳು ಸಮಾನವಾಗಿ ಹಂಚಿಕೊಳ್ಳಬೇಕು. ಯಾರಾದರೂ ಸಂಕಷ್ಟಕ್ಕೆ ಸಿಲುಕಿದರೆ ಎಲ್ಲರೂ ಒಗ್ಗಟ್ಟಿನಿಂದ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಹೇಳುತ್ತಿರುವುದು ವಿಡಿಯೋದಲ್ಲಿದೆ.

ಈ ವೇಳೆ ಇತರ ಕಾರ್ಪೊರೇಟರ್‌ಗಳು ಕೂಡ ಇದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಅಲ್ಲದೆ, ಈ ಪ್ರಮಾಣವನ್ನು ಯಾರಾದರೂ ಉಲ್ಲಂಘಿಸಿದರೆ ಅವರನ್ನು ದ್ರೋಹಿ ಎಂದು ಪರಿಗಣಿಸುವುದಾಗಿ ಹೇಳಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಹಜಹಾನ್‌ಪುರ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಕೆಲವರು ಕಾರ್ಪೊರೇಟರ್‌ಗಳ ಆಸ್ತಿ ಮತ್ತು ಜೀವನಶೈಲಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ನಡುವೆ, ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಮಹಾನಗರ ಪಾಲಿಕೆ ಆಯುಕ್ತೆ ಸೌಮ್ಯಾ ಗುರುರಾಣಿ, ವೈರಲ್ ಆಗಿರುವ ವಿಡಿಯೋ 2025ರ ನವೆಂಬರ್ ತಿಂಗಳದ್ದು ಎಂದು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಪಾಲಿಕೆಗೆ ಬೇರೆ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿರುವ ಆಯುಕ್ತೆ, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿಡಿಯೋ ನಿಜವಾಗಿಯೂ ಲಂಚ ಹಂಚಿಕೆ ಕುರಿತ ಪ್ರಮಾಣವೇ ಅಥವಾ ಬೇರೆ ಸಂದರ್ಭದಲ್ಲಿನ ದೃಶ್ಯವೇ ಎಂಬುದರ ಬಗ್ಗೆ ತನಿಖೆಯಿಂದ ಸ್ಪಷ್ಟತೆ ಸಿಗಬೇಕಿದೆ.

Related News

error: Content is protected !!