
ಪಾಕಿಸ್ತಾನದ ಜನಪ್ರಿಯ ಟಿಕ್‌ಟಾಕ್ ಸ್ಟಾರ್ ಶಂಸು ಬೀಬಿ ಅಲಿಯಾಸ್ ಆಯೆಶಾ ಗಿಲಮಾನಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಟ್ಯಾಕ್ಸಿಲಾದಲ್ಲಿ ನಡೆದಿದೆ. ಆಗಸ್ಟ್ 14ರಂದು ನಡೆದಿರುವ ಈ ಘಟನೆ ಸ್ಥಳೀಯವಾಗಿ ಆತಂಕ ಮೂಡಿಸಿದೆ.
ಮಾಹಿತಿಯ ಪ್ರಕಾರ, ಶಂಸು ಬೀಬಿ ಅವರ ತಂದೆ ಫಝಲ್ ಸಾಹಿಬ್‌ಝಾದಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಕಶಿಶ್ ಅಲಿಯಾಸ್ ಕಾಶಿ ಎಂಬಾತ ಶಂಸು ಬೀಬಿಗೆ ಕರೆ ಮಾಡಿ ಮನೆಯ ಹೊರಗೆ ಬರುವಂತೆ ತಿಳಿಸಿದ್ದ ಎನ್ನಲಾಗಿದೆ.
ಅದರಂತೆ ಶಂಸು ಬೀಬಿ ತಮ್ಮ 15 ವರ್ಷದ ಸಹೋದರಿ ಅಸಿಮಾ ಹಾಗೂ ಸಹೋದರ ನೈಮತುಲ್ಲಾ ಜೊತೆ ಕಾರಿನಲ್ಲಿ ಹೊರಟಿದ್ದರು. ಪೆಟ್ರೋಲ್ ಪಂಪ್‌ವೊಂದರ ಸಮೀಪ ಕಾರು ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ನೈಮತುಲ್ಲಾ ಪೊಲೀಸರಿಗೆ ತಿಳಿಸಿದ್ದಾರೆ.
ದಾಳಿಯ ವೇಳೆ ಗುಂಡು ಶಂಸು ಬೀಬಿಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಯ ಹಿಂದಿನ ಕಾರಣ ಮತ್ತು ಆರೋಪಿಗಳ ಗುರುತು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಜನಪ್ರಿಯ ಸಾಮಾಜಿಕ ಜಾಲತಾಣ ತಾರೆಯೊಬ್ಬರು ಹೀಗೆ ದಾರುಣವಾಗಿ ಮೃತಪಟ್ಟಿರುವುದು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.






