ದಾವಣಗೆರೆ: ಶಾಲೆಯ ಸಮವಸ್ತ್ರದಲ್ಲೇ ಅಜ್ಜಿಯ ಎದೆಗಪ್ಪಿಕೊಂಡು ಏನೂ ಅರಿಯದೆ ದಿಟ್ಟಿಸುತ್ತಿರುವ ಇಬ್ಬರು ಪುಟ್ಟ ಕಂದಮ್ಮಗಳು… “ನನ್ನ ಮಗನನ್ನು ತಂದುಕೊಡಿ” ಎಂದು ಎದೆ ಬಡಿದುಕೊಂಡು ಕಣ್ಣೀರಿಡುತ್ತಿರುವ ಹೆತ್ತವ್ವ… ಇಡೀ ಊರನ್ನೇ ಆವರಿಸಿರುವ ಸ್ಮಶಾನ ಮೌನ. ದಾವಣಗೆರೆಯ ಪಾಮೇನಹಳ್ಳಿಯಲ್ಲಿ ನಡೆದಿರುವ ಈ ದುರಂತ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ.

12 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ರಘು (36) ಹಾಗೂ ಶೃತಿ ದಂಪತಿಗೆ ಇಬ್ಬರು ಮಕ್ಕಳಿದ್ದರು. ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಸಾಕುತ್ತಿದ್ದ ರಘು, ಮದ್ಯಪಾನದ ಚಟ ಹೊಂದಿದ್ದ ಎನ್ನಲಾಗಿದ್ದು, ಅದನ್ನು ಹೊರತುಪಡಿಸಿದರೆ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದ. ಆದರೆ, ಪತ್ನಿ ಶೃತಿಗೆ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನಿಟ್ಟುವಳ್ಳಿಯ ಉಬೇದುಲ್ಲಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧಕ್ಕೆ ಗಂಡ ರಘು ವಿರೋಧ ವ್ಯಕ್ತಪಡಿಸಿದ್ದೇ ಕೊಲೆಗೆ ಕಾರಣವಾಯಿತೇ ಎಂಬ ಅನುಮಾನ ಇದೀಗ ಪೊಲೀಸರ ತನಿಖೆಯಲ್ಲಿ ಪ್ರಮುಖ ಅಂಶವಾಗಿದೆ.

ಮದ್ಯದ ಅಮಲಿನಲ್ಲಿ ಗಂಡನ ಕೊಲೆ?

ಆಗಸ್ಟ್ 11ರಂದು ಪರಿಚಯಸ್ಥ ಸುರೇಶ್ ಎಂಬಾತನ ಮೂಲಕ ರಘುವನ್ನು ಬಾರ್‌ಗೆ ಕರೆಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಅಲ್ಲಿ ಆತನಿಗೆ ಮದ್ಯ ಕುಡಿಸಿದ ಬಳಿಕ ಹರಿಹರದ ತುಂಗಭದ್ರಾ ನದಿ ತೀರಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದು ಆರೋಪಿಗಳು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದ್ದು, ನದಿಯಲ್ಲಿ ರಘುವಿನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಗಂಡ ಕಾಣೆಯಾಗಿದ್ದಾನೆಂದು ಕಣ್ಣೀರಿನ ನಾಟಕ?

ಘಟನೆ ಬಳಿಕ ಶೃತಿ, “ನನ್ನ ಗಂಡ ಕಾಣೆಯಾಗಿದ್ದಾರೆ” ಎಂದು ಅತ್ತೆಯೊಂದಿಗೆ ಸೇರಿಕೊಂಡು ಹುಡುಕಾಟ ನಡೆಸಿದ್ದಳು ಎನ್ನಲಾಗಿದೆ. ಮಗನಿಗಾಗಿ ಅತ್ತೆ ಸಾಲ-ಸೋಲ ಮಾಡಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲೂ ಶೃತಿ ಅನುಮಾನ ಬಾರದಂತೆ ವರ್ತಿಸಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆದರೆ, ಆಕೆಯ ಕೆಲವು ನಡೆ-ನುಡಿಗಳ ಬಗ್ಗೆ ಸಂಬಂಧಿಕರಿಗೆ ಅನುಮಾನ ಮೂಡಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಹದಡಿ ಪೊಲೀಸರು ಶೃತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಯಲಾಗಿವೆ ಎಂದು ತಿಳಿದುಬಂದಿದೆ.

ಪತ್ನಿ, ಪ್ರಿಯಕರ ಸೇರಿ ಮೂವರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಶೃತಿ, ಆಕೆಯ ಪ್ರಿಯಕರ ಉಬೇದುಲ್ಲಾ ಹಾಗೂ ಸುರೇಶ್ ಅವರನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ರಘುವಿನ ಮೃತದೇಹ ಪತ್ತೆಗಾಗಿ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ.

ಈ ಘಟನೆ ಇದೀಗ ಅತ್ಯಂತ ಕರುಣಾಜನಕ ಪ್ರಶ್ನೆಯೊಂದನ್ನು ಎತ್ತಿದೆ. ತಂದೆಯನ್ನು ಕಳೆದುಕೊಂಡು, ತಾಯಿಯೇ ಜೈಲು ಸೇರಿದ ಬಳಿಕ ಆ ಇಬ್ಬರು ಪುಟ್ಟ ಮಕ್ಕಳ ಭವಿಷ್ಯವೇನು?

ಕ್ಷಣಿಕ ಸಂಬಂಧದ ಆರೋಪದಲ್ಲಿ ನಡೆದಿರುವ ಈ ದುರಂತದಲ್ಲಿ ಒಂದು ಕುಟುಂಬವೇ ಛಿದ್ರಗೊಂಡಿದೆ. ಹೆತ್ತವರ ತಪ್ಪಿಗೆ ಯಾವುದೇ ಸಂಬಂಧವಿಲ್ಲದ ಮುಗ್ಧ ಮಕ್ಕಳು ಮಾತ್ರ ಇದೀಗ ತಾಯಿ-ತಂದೆಯ ನೆರಳಿಲ್ಲದೆ ಬದುಕುವ ಅನಿವಾರ್ಯತೆಗೆ ಸಿಲುಕಿದ್ದಾರೆ.

Related News

error: Content is protected !!