ಹಾವೇರಿ: ಹಾನಗಲ್ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ 20 ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಅನುಪಮಾ ಸಾವಿನ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಮೃತಳ ಕುಟುಂಬಸ್ಥರು ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ.

ಕುಟುಂಬದವರ ಆರೋಪದ ಪ್ರಕಾರ, ಮೃತಳ ಮನೆಯ ಎದುರು ವಾಸವಿದ್ದ ಅಕ್ಷಯ ಎಂಬ ವಿವಾಹಿತ ವ್ಯಕ್ತಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅನುಪಮಾಳಿಗೆ ಪದೇಪದೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ವಿಚಾರವನ್ನು ಅನುಪಮಾ ತನ್ನ ಅಕ್ಕನ ಬಳಿ ಹಂಚಿಕೊಂಡಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸಾವಿಗೂ ಮುನ್ನ ಅಕ್ಕ-ತಂಗಿ ನಡೆಸಿದ ಸಂಭಾಷಣೆಯ ಆಡಿಯೋ ತಮ್ಮ ಬಳಿ ಇದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ಅನುಪಮಾ ದರ್ಶನ ಎಂಬ ಯುವಕನನ್ನು ಪ್ರೀತಿಸುತ್ತಿದ್ದ ವಿಚಾರ ಸುಮಾರು ಒಂದು ವರ್ಷದ ಹಿಂದೆಯೇ ಕುಟುಂಬಕ್ಕೆ ತಿಳಿದಿತ್ತು ಎನ್ನಲಾಗಿದೆ. ಆದರೆ, ಮನೆಯ ಎದುರಿನ ನಿವಾಸಿಯಾಗಿದ್ದ ಅಕ್ಷಯ ಆಗಾಗ ಮನೆಗೆ ಬರುತ್ತಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅನುಪಮಾಳ ಸಾವಿಗೆ ಅಕ್ಷಯನೇ ಕಾರಣ ಎಂದು ಆರೋಪಿಸಿರುವ ಕುಟುಂಬದವರು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರು ಮಾಡಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!