ಬೆಲ್ಜಿಯಂನಲ್ಲಿ ನಿರ್ಮಾಣ ಹಂತದ ಕಾಮಗಾರಿ ವೇಳೆ 18 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಬರೋಬ್ಬರಿ ₹99 ಕೋಟಿ ಮೌಲ್ಯದ ಚಿನ್ನದ ನಿಧಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

‘ದಿ ಗಾರ್ಡಿಯನ್’ ವರದಿ ಪ್ರಕಾರ, ಬ್ರಸೆಲ್ಸ್ ಸಮೀಪದ ವಾನ್ ಲಾಂಗನ್‌ಹೋವೆಸ್ಟ್ರಾಟ್‌ನಲ್ಲಿರುವ ಹಳೆಯ ಮದ್ಯದ ಕಾರ್ಖಾನೆ ಆವರಣದಲ್ಲಿ ಚರಂಡಿ ವ್ಯವಸ್ಥೆಗಾಗಿ ಗುಂಡಿ ತೋಡುವ ಕೆಲಸ ನಡೆಯುತ್ತಿತ್ತು. ಈ ವೇಳೆ ಕೋಬೆ ಎಂಬ ವಿದ್ಯಾರ್ಥಿ ತನ್ನ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದಾಗ ಈ ಅಪರೂಪದ ನಿಧಿ ಪತ್ತೆಯಾಗಿದೆ.

ಪತ್ತೆಯಾದ ನಿಧಿಯಲ್ಲಿ ಚಿನ್ನದ ನಾಣ್ಯಗಳು, ಚಿನ್ನದ ತುಣುಕುಗಳು ಹಾಗೂ ಸಂಖ್ಯೆಗಳ ಗುರುತು ಹೊಂದಿರುವ ಬಂಗಾರದ ಗಟ್ಟಿಗಳು ಸೇರಿವೆ. ಇವೆಲ್ಲವನ್ನೂ ಚೀಲವೊಂದರಲ್ಲಿ ತುಂಬಿ, ಹಳೆಯ ಕಟ್ಟಡದ ತಳಮಹಡಿಯ ಸುಟ್ಟ ಇಟ್ಟಿಗೆಯ ಗೋಡೆಯೊಳಗೆ ಬಚ್ಚಿಡಲಾಗಿತ್ತು ಎನ್ನಲಾಗಿದೆ.

ಈ ಕಟ್ಟಡವು 19ನೇ ಶತಮಾನದ ಅಂತ್ಯದಲ್ಲಿ ಮದ್ಯದ ಕಾರ್ಖಾನೆಯ ಮಾಲೀಕರಾಗಿದ್ದ ಥಿಯೋಫಿಲಸ್ ವಾನ್ ಅಸ್ಶೆ ಅವರಿಗಾಗಿ ನಿರ್ಮಿಸಲಾಗಿದ್ದ ವಿಶಾಲ ಬಂಗಲೆಯ ಭಾಗವಾಗಿತ್ತು ಎಂದು ವರದಿಯಾಗಿದೆ.

ನಿಧಿ ಪತ್ತೆಯಾದ ಕೂಡಲೇ ಕೋಬೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಚಿನ್ನವನ್ನು ಬ್ರಸೆಲ್ಸ್‌ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಅದರ ನಿಜವಾದ ಮಾಲೀಕತ್ವದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಅಪರೂಪದ ಪತ್ತೆಯ ಕುರಿತು ಪ್ರತಿಕ್ರಿಯಿಸಿರುವ ಕೋಬೆ, “ಒಂದೆರಡು ನಾಣ್ಯಗಳು ಮಾತ್ರ ಸಿಕ್ಕಿದ್ದರೆ ಬಹುಶಃ ನಾವು ನೀಡುತ್ತಿರಲಿಲ್ಲವೇನೋ. ಆದರೆ ಇಷ್ಟು ದೊಡ್ಡ ಪ್ರಮಾಣದ ನಿಧಿ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ನಮಗೆ ಯಾವುದಾದರೂ ಪುರಸ್ಕಾರ ಸಿಗಬಹುದು ಎಂಬ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.

ಹೀಗಾಗಿ, ಸಾಮಾನ್ಯವಾಗಿ ಚರಂಡಿ ಕಾಮಗಾರಿಗಾಗಿ ತೋಡಲಾಗಿದ್ದ ಗುಂಡಿಯೊಂದು 18 ವರ್ಷದ ವಿದ್ಯಾರ್ಥಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಐತಿಹಾಸಿಕ ಚಿನ್ನದ ನಿಧಿಯನ್ನು ಹುಡುಕಿಕೊಟ್ಟಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Related News

error: Content is protected !!