
ಗದಗ: ಎಸ್.ಎಂ. ಕೃಷ್ಣಾ ನಗರದ 26 ವರ್ಷದ ಯುವತಿ ಮೇಲೆ ಪ್ರತ್ಯೇಕವಾಗಿ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರೋಪದ ಪ್ರಕರಣದಲ್ಲಿ ಆರ್ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಟಗೇರಿ ನಿವಾಸಿಗಳಾದ ಸಿಕಂದರ್ ಗುಲಾಬಸಾಬ ಬೇಪಾರಿ, ಶಬೀರ ಅಹ್ಮದ್ ಅಲಿಯಾಸ್ ಜೂನಸಾಬ ಮಹ್ಮದ್ ರಫೀಕ್ ಲಂಗೋಟಿ, ಪ್ರದೀಪ್ ಸಾಗರ ನವಲೇಕರ, ಭರತ್ ಮಹಾದೇವಪ್ಪ ಕೊರವರ, ಸಂದೀಪ್ ಸಾಗರ ನವಲೇಕರ, ಬೆಳ್ಳಟ್ಟಿ ಗ್ರಾಮದ ಆರ್ಎಂಪಿ ವೈದ್ಯ ನಾಗರಾಜ್ ಚಿದಾನಂದ ಕಮತರ ಹಾಗೂ ಶಿಗ್ಲಿಯ ಸ್ಟಾಫ್ ನರ್ಸ್ ರೇಖಾ ಫಕೀರಪ್ಪ ಶಿರಹಟ್ಟಿ ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಜುಲೈ 26ರಂದು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಅತ್ಯಾಚಾರ ಹಾಗೂ ಗರ್ಭಪಾತ ಮಾಡಿಸಿದ ಕುರಿತು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಂತೆ ಸಿಕಂದರ್, ಶಬೀರ ಅಹ್ಮದ್, ಪ್ರದೀಪ್ ಹಾಗೂ ಭರತ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಯುವತಿ ಗರ್ಭಿಣಿಯಾದ ಬಳಿಕ ಆರೋಪಿ ಸಂದೀಪ್ ನವಲೇಕರ, ಆರ್ಎಂಪಿ ವೈದ್ಯ ನಾಗರಾಜ್ ಕಮತರ ಹಾಗೂ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಅವರ ಸಹಕಾರದೊಂದಿಗೆ ಗರ್ಭಪಾತ ಮಾಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ವಿಶೇಷ ತನಿಖಾ ತಂಡ ರಚಿಸಿದ್ದರು. ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಲ್.ಕೆ. ಜೂಲಕಟ್ಟಿ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು.
ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.






