ಸಿಸಿಟಿವಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಪತ್ತೆ; ಬೈಕ್, ಹಣ ವಶ

ಹೊನ್ನಾವರ: ಬ್ಯಾಂಕ್‌ನಿಂದ ಹಣ ಪಡೆದು ಹೊರಬಂದ ವ್ಯಕ್ತಿಯೊಬ್ಬರನ್ನು ಬೈಕ್‌ನಲ್ಲಿ ಕರೆದೊಯ್ದು ಹಣ ಕಸಿದುಕೊಂಡು ಜೀವ ಬೆದರಿಕೆ ಹಾಕಿದ ಪ್ರಕರಣವನ್ನು ಹೊನ್ನಾವರ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮಂಕಿ ನಿವಾಸಿ ನಾಗರಾಜ್ ಶಂಕರ್ ನಾಯಕ್ ಎಂದು ಗುರುತಿಸಲಾಗಿದೆ.

ವಂದೂರು ಗ್ರಾಮದ ದುಗ್ಗುರು ನಿವಾಸಿ ಶಂಕರ್ ವಿಠೋಬ ನಾಯ್ಕ ಅವರು ಹೊನ್ನಾವರ ಪಟ್ಟಣದ ಅರ್ಬನ್ ಬ್ಯಾಂಕ್‌ನಲ್ಲಿ ಚಿನ್ನದ ಸರವನ್ನು ಅಡವಿಟ್ಟು ₹1.50 ಲಕ್ಷ ಸಾಲ ಪಡೆದಿದ್ದರು. ಈ ಪೈಕಿ ₹3,500 ಹಣವನ್ನು ಶರ್ಟ್‌ನ ಮೇಲಿನ ಜೇಬಿನಲ್ಲಿ ಇಟ್ಟುಕೊಂಡಿದ್ದರೆ, ಉಳಿದ ಹಣವನ್ನು ಕೈಚೀಲದಲ್ಲಿಟ್ಟುಕೊಂಡಿದ್ದರು.

ಬ್ಯಾಂಕ್‌ನಿಂದ ಹಣ ಪಡೆದು ಶರಾವತಿ ಸರ್ಕಲ್‌ ಕಡೆಗೆ ಬರುತ್ತಿದ್ದ ವೇಳೆ ನಾಗರಾಜ್ ನಾಯಕ್ ಬೈಕ್‌ನಲ್ಲಿ ಬಿಡುವುದಾಗಿ ಹೇಳಿ ಶಂಕರ್ ಅವರನ್ನು ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿದೆ.

ಸ್ವಲ್ಪ ದೂರ ತೆರಳಿದ ಬಳಿಕ ನಾಗರಾಜ್, ಶಂಕರ್ ಅವರ ಶರ್ಟ್ ಜೇಬಿನಲ್ಲಿದ್ದ ₹3,500 ಹಣವನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಹಣ ನೀಡಲು ನಿರಾಕರಿಸಿದಾಗ ಬೈಕ್‌ನಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಬೆದರಿಸಿ ಹಣ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಶಂಕರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಿಸಿಟಿವಿ, ತಾಂತ್ರಿಕ ಮಾಹಿತಿ ನೆರವು

ಘಟನೆ ಕುರಿತು ಶಂಕರ್ ವಿಠೋಬ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ತಾಂತ್ರಿಕ ಮಾಹಿತಿಯ ನೆರವಿನಿಂದ ಆರೋಪಿಯ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿದರು.

ತನಿಖೆಯ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಕಸಿದುಕೊಂಡಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕ್ಷಿಪ್ರ ಕಾರ್ಯಾಚರಣೆಗೆ ಮೆಚ್ಚುಗೆ

ಹೊನ್ನಾವರ ಪೊಲೀಸ್ ಠಾಣೆಯ ಪಿಐ ಸಿದ್ದರಾಮೇಶ್ವರ ಅವರ ನೇತೃತ್ವದಲ್ಲಿ ಪಿಎಸ್‌ಐ ಮಹಾಂತೇಶ್ ವಾಲ್ಮೀಕಿ ಹಾಗೂ ಸಿಬ್ಬಂದಿಗಳಾದ ಮನೋಜ್, ರವಿ ಮತ್ತು ಗಜಾನನ ನಾಯ್ಕ ಅವರು ಕಾರ್ಯಾಚರಣೆ ನಡೆಸಿದರು.

ಘಟನೆ ನಡೆದ ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related News

error: Content is protected !!