ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆಗೆ ಸಂಚು ರೂಪಿಸಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಪತಿಯನ್ನು ಕರೆದುಕೊಂಡು ಹೋಗಿದ್ದ ಮಹಿಳೆ, ಪ್ರಯಾಣದ ಪ್ರತಿಯೊಂದು ಹಂತದಲ್ಲೂ ಲೈವ್ ಲೊಕೇಶನ್ ಅನ್ನು ಪ್ರಿಯಕರನಿಗೆ ಕಳುಹಿಸಿ ಕೊಲೆ ನಡೆಸಲು ಸಹಕರಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಶೂಳಗಿರಿಯ ನಿವಾಸಿ ರಮೇಶ್ (23) ಮತ್ತು ಹಾಸಿನಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಬ್ಬಳು ಮಗಳಿದ್ದಾಳೆ. ಆದರೆ ಮದುವೆಗೂ ಮುನ್ನದಿಂದಲೇ ಹಾಸಿನಿ ಮತ್ತು ಬಾಲ್ಯದ ಗೆಳೆಯ ಯುಗಂಧರ್ ನಡುವೆ ಪ್ರೇಮ ಸಂಬಂಧವಿದ್ದು, ಮದುವೆಯಾದ ಬಳಿಕವೂ ಅದು ಮುಂದುವರಿದಿತ್ತು ಎನ್ನಲಾಗಿದೆ. ಪತಿಯ ಅಡ್ಡಿ ದೂರವಾದರೆ ಪ್ರಿಯಕರನೊಂದಿಗೆ ಬದುಕಬಹುದು ಎಂಬ ಉದ್ದೇಶದಿಂದ ಇಬ್ಬರೂ ಸೇರಿ ಕೊಲೆಯ ಸಂಚು ರೂಪಿಸಿದ್ದರು.
ಅದರಂತೆ ಅಮಾವಾಸ್ಯೆಯ ದಿನ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗೋಣ ಎಂದು ಹಾಸಿನಿ ಪತಿಯನ್ನು ಒಪ್ಪಿಸಿ, ಮಗಳೊಂದಿಗೆ ಬೈಕ್‌ನಲ್ಲಿ ಹೊರಟಿದ್ದಳು. ದಾರಿಯುದ್ದಕ್ಕೂ ತನ್ನ ಮೊಬೈಲ್ ಮೂಲಕ ಲೈವ್ ಲೊಕೇಶನ್ ಅನ್ನು ಪ್ರಿಯಕರ ಯುಗಂಧರ್‌ಗೆ ಹಂಚಿಕೊಂಡಿದ್ದಾಳೆ. ಗುಡುಪಲ್ಲೆ ಮಂಡಲದ ಮಲ್ಲಪ್ಪಕೊಂಡ ಬೆಟ್ಟದ ಮೂರನೇ ಹೇರ್‌ಪಿನ್ ತಿರುವಿನ ಬಳಿ ತಲುಪಿದಾಗ, ತನ್ನ ಹ್ಯಾಂಡ್‌ಬ್ಯಾಗ್ ಕೆಳಗೆ ಬಿದ್ದಿದೆ ಎಂದು ಹೇಳಿ ಬೈಕ್ ನಿಲ್ಲಿಸುವಂತೆ ಕೇಳಿದ್ದಾಳೆ.
ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡು ಲೈವ್ ಲೊಕೇಶನ್ ಹಿಂಬಾಲಿಸಿ ಅಲ್ಲಿಗೆ ಬಂದಿದ್ದ ಯುಗಂಧರ್ ಹಾಗೂ ಆತನ ಸ್ನೇಹಿತರು ರಮೇಶ್‌ನನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರ್ಘಟನೆ ವೇಳೆ ದಂಪತಿಯ ಪುಟ್ಟ ಮಗಳು ಸಹ ಸ್ಥಳದಲ್ಲೇ ಇದ್ದಳು ಎನ್ನಲಾಗಿದೆ.
ರಮೇಶ್ ಮತ್ತು ಹಾಸಿನಿ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಹಾಸಿನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ದೇವಸ್ಥಾನದ ಮಾರ್ಗದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ರಮೇಶ್ ಜೊತೆ ತೆರಳಿದ್ದ ಹಾಸಿನಿ ನಂತರ ಬೇರೆ ವ್ಯಕ್ತಿಗಳೊಂದಿಗೆ ಹಿಂದಿರುಗುತ್ತಿರುವ ದೃಶ್ಯಗಳು ಪತ್ತೆಯಾಗಿವೆ. ಬಳಿಕ ಮೊಬೈಲ್ ಕರೆ ವಿವರಗಳು ಹಾಗೂ ಲೊಕೇಶನ್ ಮಾಹಿತಿ ಆಧರಿಸಿ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದಾಗ ರಮೇಶ್‌ನ ಮೃತದೇಹ ಪತ್ತೆಯಾಯಿತು.
ಹಾಸಿನಿಯ ಮೊಬೈಲ್ ಪರಿಶೀಲಿಸಿದ ವೇಳೆ ಪ್ರಿಯಕರನಿಗೆ ಲೈವ್ ಲೊಕೇಶನ್ ಕಳುಹಿಸಿರುವುದು ಹಾಗೂ ಕೊಲೆ ಸಂಚಿನಲ್ಲಿ ಆಕೆಯ ಪಾತ್ರವಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಾಸಿನಿ, ಯುಗಂಧರ್ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
