ಬಳ್ಳಾರಿ: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಆಘಾತ ಎದುರಾಗಿದೆ. ರಿಸೆಪ್ಷನ್ ಕಾರ್ಯಕ್ರಮ ಮುಗಿಸಿ ಗೆಳೆಯನ ಕರೆ ಬಂದಿದೆ ಎಂದು ಮನೆಯಿಂದ ಹೊರಟ ನವವಿವಾಹಿತ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಳ್ಳಾರಿ ನಗರದ 29ನೇ ವಾರ್ಡ್‌ನ ಬಟ್ಟಿ ಏರಿಯಾ ಸಮತಾ ನಗರದಲ್ಲಿ ನಡೆದಿದೆ.
ಮೃತನನ್ನು ನಬಿ ರಸೂಲ್ ಎಂದು ಗುರುತಿಸಲಾಗಿದೆ. ಅವರು ಬೋಟಿ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದುದರ ಜೊತೆಗೆ ಗಾರೆ ಕೆಲಸವನ್ನೂ ಮಾಡುತ್ತಿದ್ದರು.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 15 ದಿನಗಳ ಹಿಂದೆ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು ನಬಿ ರಸೂಲ್ ಪ್ರೀತಿಸಿ ಕರೆದುಕೊಂಡು ಹೋಗಿದ್ದರು. ಬಳಿಕ ಇಬ್ಬರೂ ಮನೆಗೆ ಮರಳಿದ್ದು, ಕುಟುಂಬದವರ ಒಪ್ಪಿಗೆಯೊಂದಿಗೆ ಗುರುವಾರ ಮದುವೆ ಹಾಗೂ ಅದೇ ದಿನ ಸಂಜೆ ರಿಸೆಪ್ಷನ್ ಕಾರ್ಯಕ್ರಮವನ್ನು ಸಂಭ್ರಮದಿಂದ ನೆರವೇರಿಸಲಾಗಿತ್ತು.
ರಾತ್ರಿ ಸುಮಾರು 11.30ರ ವೇಳೆಗೆ ಗೆಳೆಯನಿಂದ ಕರೆ ಬಂದಿದೆ ಎಂದು ಹೇಳಿ ನಬಿ ರಸೂಲ್ ಮನೆಯಿಂದ ಹೊರಟಿದ್ದರು. ಆದರೆ ಅವರು ಮರಳಿ ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಹುಡುಕಾಟ ಆರಂಭಿಸಿದ ಬಳಿಕ, ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ರಕ್ತದ ಮಡುವಿನಲ್ಲಿ ಅವರ ಶವ ಪತ್ತೆಯಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಡಿವೈಎಸ್‌ಪಿ ಸ್ವನದಾಳ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳ ಮಹಜರು ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಆರಂಭಿಸಿದ್ದಾರೆ.
ಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಪ್ರೇಮ ವಿವಾಹದ ಹಿನ್ನೆಲೆ, ವೈಯಕ್ತಿಕ ದ್ವೇಷ ಅಥವಾ ಇತರ ಕಾರಣಗಳಿವೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತನ ಬರ್ಬರ ಹತ್ಯೆ ನಡೆದಿರುವ ಈ ಘಟನೆ ಬಳ್ಳಾರಿ ನಗರದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕುಟುಂಬದವರ ಆಕ್ರಂದನ ಮನಕಲಕುವಂತಿದೆ.
– ವರದಿ: ಹನುಮಂತ
