ಚಿಂತಾಮಣಿ: ನಗರದ ಜೆಜೆ ಕಾಲೋನಿಯಲ್ಲಿ ನಡೆದಿದ್ದ ಇಬ್ಬರು ಸಹೋದರಿಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಮಾಹಿತಿ ಬೆಳಕಿಗೆ ಬಂದಿದೆ. ತವರು ಮನೆಗೆ ತೆರಳಿದ್ದ ಪತ್ನಿ ಮತ್ತೆ ಮನೆಗೆ ಬರಲು ನಿರಾಕರಿಸಿದ್ದರಿಂದ ಕೋಪಗೊಂಡ ಪತಿ, ಪತ್ನಿ ಹಾಗೂ ಆಕೆಯ ತಂಗಿಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಮೃತ ಶಮಾ ಮತ್ತು ಏಜಾಜ್ ಸುಮಾರು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಮಾ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದಳು. ನಂತರ ಹಲವು ಬಾರಿ ಮನೆಗೆ ಮರಳುವಂತೆ ಏಜಾಜ್ ಮನವಿ ಮಾಡಿದ್ದರೂ, ಶಮಾ ಅದನ್ನು ಒಪ್ಪಿರಲಿಲ್ಲ ಎನ್ನಲಾಗಿದೆ.

ಸೋಮವಾರ ಮುಂಜಾನೆ ಕೋಲಾರದಿಂದ ಚಿಂತಾಮಣಿಗೆ ಬಂದಿದ್ದ ಏಜಾಜ್, ಜೆಜೆ ಕಾಲೋನಿಯಲ್ಲಿರುವ ಮನೆಯೊಳಗೆ ನುಗ್ಗಿ ಮಲಗಿದ್ದ ಪತ್ನಿ ಶಮಾಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅಲ್ಲೇ ಇದ್ದ ಶಮಾಳ ತಂಗಿ ರೇಷ್ಮಾಳ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆಕೆಯನ್ನೂ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಏಜಾಜ್‌ನ ಪತ್ತೆಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related News

error: Content is protected !!