ನಂಜನಗೂಡು: ಜಮೀನು ಪೋಡಿ ಹಾಗೂ ದುರಸ್ತಿಗಾಗಿ ಲಂಚ ಪಡೆಯುತ್ತಿದ್ದ ಸರ್ವೆಯರ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಚಿಕ್ಕಯ್ಯನಛತ್ರ ಹೋಬಳಿ ಕೇಂದ್ರದ ಸರ್ವೆಯರ್ ಜಯಪ್ರಕಾಶ್ ಬಂಧಿತ ಅಧಿಕಾರಿ ಎಂದು ತಿಳಿದುಬಂದಿದೆ. ಕಡಕೊಳ ಗ್ರಾಮದ ನಾರಾಯಣ್ ಅವರಿಗೆ ಸೇರಿದ 9 ಗುಂಟೆ ಜಮೀನಿನ ಪೋಡಿ ಮತ್ತು ದುರಸ್ತಿ ಕಾರ್ಯಕ್ಕೆ ಆರೋಪಿಯು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

ಈಗಾಗಲೇ ಮುಂಗಡವಾಗಿ 80 ಸಾವಿರ ರೂಪಾಯಿ ಪಡೆದಿದ್ದ ಜಯಪ್ರಕಾಶ್, ಉಳಿದ 1.20 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಧಿಕಾರಿಯ ನಿರಂತರ ಒತ್ತಡ ಮತ್ತು ವರ್ತನೆಗೆ ಬೇಸತ್ತ ನಾರಾಯಣ್ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದರು.

ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ಲಂಚದ ಹಣ ಸ್ವೀಕರಿಸುವ ವೇಳೆ ಸರ್ವೆಯರ್ ಜಯಪ್ರಕಾಶ್ ಅವರನ್ನು ರೆಡ್‌ಹ್ಯಾಂಡಾಗಿ ಬಂಧಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಬಳಿಕ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ನಂಜನಗೂಡು ತಾಲೂಕು ಕಚೇರಿಗೆ ಕರೆತರಲಾಗಿದೆ.

Related News

error: Content is protected !!