ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವ ಬೆಳಗಾವಿ ವಿಭಾಗದ ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿವೆ. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಿ ಬೆಳಗಾವಿ ವಿಭಾಗಕ್ಕೆ ಹೊಸದಾಗಿ ಹೆಚ್ಚುವರಿ ಅಬಕಾರಿ ಆಯುಕ್ತರ ಹುದ್ದೆ ಸೃಷ್ಟಿಸಿಕೊಂಡು, ಆ ಹುದ್ದೆಯನ್ನೇ ಅಕ್ರಮ ಹಣ ಸಂಪಾದನೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ವಿಭಾಗಗಳಲ್ಲಿ ಜಂಟಿ ಆಯುಕ್ತರ ಹುದ್ದೆಗಳಿವೆ. ಈ ಹಿಂದೆ ಹೆಚ್ಚುವರಿ ಅಬಕಾರಿ ಆಯುಕ್ತರ ಹುದ್ದೆ ಬೆಂಗಳೂರು ವಿಭಾಗದಲ್ಲಷ್ಟೇ ಇತ್ತು. ಆದರೆ, ಸುಮಾರು ಎರಡು ವರ್ಷಗಳ ಹಿಂದೆ ಬೆಳಗಾವಿ ವಿಭಾಗಕ್ಕೂ ಹೊಸ ಹುದ್ದೆ ಸೃಷ್ಟಿಸಿ, ಅದರಲ್ಲಿ ವೈ. ಮಂಜುನಾಥ್ ಅವರನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ.
ಆ ಹುದ್ದೆಗೆ ಅಗತ್ಯ ಅರ್ಹತೆ ಇಲ್ಲದಿದ್ದರೂ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದ್ದ ಮಂಜುನಾಥ್, ತಮ್ಮ ಕುಟುಂಬ ಸದಸ್ಯರು ಹಾಗೂ ಅವರ ನಿಯಂತ್ರಣದಲ್ಲಿರುವ ಸಂಸ್ಥೆಗಳ ಹೆಸರಿನಲ್ಲಿ ಮದ್ಯದ ಪರವಾನಗಿ ಪಡೆದು ಅಕ್ರಮ ಮದ್ಯ ವ್ಯವಹಾರ ನಡೆಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಮೂಲಕ ಗಳಿಸಿದ ಕಪ್ಪು ಹಣವನ್ನು ಕಾನೂನುಬದ್ಧ ಆದಾಯವೆಂದು ತೋರಿಸಲು ಯತ್ನಿಸಿರುವ ಮಾಹಿತಿ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇಡಿ ನಡೆಸಿದ ದಾಳಿಯಲ್ಲಿ ವೈ. ಮಂಜುನಾಥ್ ಅವರ ನಿವಾಸ, ಕುಟುಂಬ ಸದಸ್ಯರು, ವಾಹನ ಚಾಲಕ ಹಾಗೂ ಆಪ್ತರಿಗೆ ಸೇರಿದ ವಿವಿಧ ಸ್ಥಳಗಳಿಂದ ₹5.5 ಕೋಟಿ ನಗದು ಸೇರಿದಂತೆ ಸುಮಾರು ₹13.35 ಕೋಟಿ ಮೌಲ್ಯದ ಚರಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ವೇಳೆ ಲಂಚ ಸಂಗ್ರಹ, ಮನಿ ಲಾಂಡರಿಂಗ್, ಕುಟುಂಬ ಸದಸ್ಯರ ಹೆಸರಿನಲ್ಲಿ ಮದ್ಯದ ವ್ಯಾಪಾರ ನಡೆಸಿದ ಆರೋಪ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ಬಹಿರಂಗವಾಗಿವೆ.
ಇದೇ ವೇಳೆ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನೊಳಗೊಂಡ ಸಂಘಟಿತ ಜಾಲವೇ ಕಾರ್ಯನಿರ್ವಹಿಸುತ್ತಿದ್ದು, ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳು ನಿಗದಿತ ಪ್ರಮಾಣದ ಲಂಚ ಸಂಗ್ರಹಿಸಲಾಗುತ್ತಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರವಾನಗಿ ನವೀಕರಣ, ಸ್ಥಳಾಂತರ ಹಾಗೂ ಹೊಸ ಲೈಸೆನ್ಸ್ ಮಂಜೂರಾತಿ ವೇಳೆ ಸಂಗ್ರಹವಾಗುವ ಹಣವನ್ನು ಮಧ್ಯವರ್ತಿಗಳ ಮೂಲಕ ಮೇಲ್ಮಟ್ಟದ ಅಧಿಕಾರಿಗಳಿಗೆ ತಲುಪಿಸಲಾಗುತ್ತಿತ್ತು ಎನ್ನಲಾಗಿದೆ.
ಅಬಕಾರಿ ಇಲಾಖೆಯ ವಿವಿಧ ಪ್ರಮುಖ ಹುದ್ದೆಗಳಲ್ಲಿಯೂ ಕೆಳಹಂತದ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಇಲಾಖೆಯ ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತ (ಆಡಳಿತ) ಹಾಗೂ ಹೆಚ್ಚುವರಿ ಆಯುಕ್ತ (ಪ್ರಧಾನ ಕಚೇರಿ ಮತ್ತು ತಪಾಸಣೆ) ಹುದ್ದೆಗಳಲ್ಲಿ ಕೆಎಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಉಪ ಆಯುಕ್ತರ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ.
ಇಲಾಖೆಯ ಬಹುತೇಕ ಹಿರಿಯ ಅಧಿಕಾರಿಗಳು ವ್ಯವಸ್ಥಿತ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಜಿಲ್ಲಾ ಮಟ್ಟದಲ್ಲಿ ಉಪ ಆಯುಕ್ತರು, ಅಧೀಕ್ಷಕರು ಹಾಗೂ ನಿರೀಕ್ಷಕರು ಅಕ್ರಮಗಳಲ್ಲಿ ತೊಡಗಿದ್ದರೆ, ರಾಜ್ಯಮಟ್ಟದಲ್ಲಿ ಜಂಟಿ ಆಯುಕ್ತರು ಮತ್ತು ಹೆಚ್ಚುವರಿ ಆಯುಕ್ತರು ಭ್ರಷ್ಟಾಚಾರದ ಜಾಲವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಕೆಎಎಸ್ ಅಧಿಕಾರಿಯೊಬ್ಬರು ಈಗಲೂ ಹೆಚ್ಚುವರಿ ಆಯುಕ್ತರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪ್ರಶ್ನೆಗೆ ಕಾರಣವಾಗಿದೆ.
ಇಲಾಖೆಯಲ್ಲಿ ಅನಗತ್ಯವಾಗಿ ಹೆಚ್ಚುವರಿ ಆಯುಕ್ತ, ಹೆಚ್ಚುವರಿ ಅಬಕಾರಿ ಆಯುಕ್ತ ಹಾಗೂ ಜಂಟಿ ಆಯುಕ್ತ ಹುದ್ದೆಗಳನ್ನು ಸೃಷ್ಟಿಸಿರುವುದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇಂತಹ ಅನಗತ್ಯ ಹುದ್ದೆಗಳನ್ನು ರದ್ದುಪಡಿಸಿ, ಅಬಕಾರಿ ಇಲಾಖೆಯ ಆಯುಕ್ತರ ಹುದ್ದೆಗೆ ಐಪಿಎಸ್ ಅಧಿಕಾರಿಯನ್ನು ನೇಮಿಸುವ ಮೂಲಕ ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಶಿಸ್ತು ತರಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
