ಮುಂಬೈ: ಮುಹರಂ ಮೆರವಣಿಗೆಯ ವೇಳೆ ಸಾರ್ವಜನಿಕರಿಗೆ ವಿಷಪ್ರಾಶನ ಮಾಡಿಸಲು ಸಂಚು ರೂಪಿಸಲಾಗಿದೆ ಎಂಬ ಶಂಕೆಯ ಮೇರೆಗೆ ಮುಂಬೈ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿ, 14,900 ವಿಷಪೂರಿತ ಕ್ಯಾಪ್ಸೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪುಣೆ ಮೂಲದ ಉದ್ಯಮಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಸಾಗಿಸಲಾಗುತ್ತಿದ್ದ ಕ್ಯಾಪ್ಸೂಲ್ಗಳನ್ನು ಜಪ್ತಿ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಅವುಗಳಲ್ಲಿ ‘ಜಿಂಕ್ ಫಾಸ್ಫೈಡ್’ ಎಂಬ ತೀವ್ರ ವಿಷಕಾರಿ ರಾಸಾಯನಿಕವನ್ನು ತುಂಬಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ರಾಸಾಯನಿಕವನ್ನು ಸಾಮಾನ್ಯವಾಗಿ ಇಲಿ ವಿಷವಾಗಿ ಬಳಸಲಾಗುತ್ತದೆ.
ಮೆರವಣಿಗೆಯಲ್ಲಿ ಭಾಗವಹಿಸುವ ಜನರಿಗೆ ಈ ಕ್ಯಾಪ್ಸೂಲ್ಗಳನ್ನು ತಲುಪಿಸಿ ಅನಾಹುತ ಸೃಷ್ಟಿಸುವ ಉದ್ದೇಶ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಬಂಧಿತನ ಸಂಪರ್ಕಗಳು, ಆರ್ಥಿಕ ವ್ಯವಹಾರಗಳು ಹಾಗೂ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಪ್ರಕರಣದ ಹಿಂದೆ ಯಾವುದೇ ಸಂಘಟನೆ ಅಥವಾ ವಿದ್ವಂಸಕ ಶಕ್ತಿಗಳ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ಮುಂದುವರಿದಿದೆ. ಭದ್ರತಾ ದೃಷ್ಟಿಯಿಂದ ಮುಹರಂ ಮೆರವಣಿಗೆಗಳ ಸುತ್ತ ಪೊಲೀಸ್ ಬಂದೋಬಸ್ತ್ ಮತ್ತಷ್ಟು ಕಟ್ಟು ನಿಟ್ಟಾಗಿಸಲಾಗಿದೆ.
