ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025-26ನೇ ಸಾಲಿನ ಪ್ರತಿಷ್ಠಿತ ‘ಡಿಜಿ-ಐಜಿಪಿ ಪ್ರಶಂಸನಾ ಪದಕ’ ಘೋಷಿಸಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಸೋಮವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜ್ಯದ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಐಜಿಪಿಗಳಾದ ಸತೀಶ್ ಕುಮಾರ್ ಎನ್. ಹಾಗೂ ಶಶಿಕುಮಾರ್ ಎನ್., ಡಿಐಜಿಪಿಗಳಾದ ಶಂತನು ಸಿನ್ಹಾ, ಡಾ. ಭೀಮಶಂಕರ್ ಎಸ್. ಗುಳೇದ್, ಹನುಮಂತರಾಯ, ಡಾ. ಧರಣಿ ದೇವಿ ಕೆ., ಶ್ರೀಧರ ಟಿ. ಮತ್ತು ಕೆ. ಪರಶುರಾಮ್ ಪ್ರಮುಖರಾಗಿದ್ದಾರೆ.

ಎಸ್ಪಿಗಳಾದ ಲಕ್ಷ್ಮಣ ನಿಂಬರಗಿ, ಮುತ್ತುರಾಜು ಎಂ., ರಶ್ಮಿ ಬಿ. ಪರಡ್ಡಿ, ಯಶೋಧಾ ವಂಟಗೋಡಿ, ಅದ್ದೂರು ಶ್ರೀನಿವಾಸುಲು, ಕನಿಕಾ ಸಿಕ್ರಿವಾಲ್, ಗುಂಜನ್ ಆರ್ಯ, ಶುಭಾನ್ವಿತಾ, ಡಾ. ರಾಮ್ ಎಲ್. ಅರಸಿದ್ದಿ, ರೋಹನ್ ಜಗದೀಶ್, ಎಸ್. ಜಹನ್ವಿ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರು ನಗರದ ಡಿಸಿಪಿಗಳಾದ ಮೊಹಮ್ಮದ್ ಸುಜೀತ್ ಎಂ.ಎಸ್., ಜಯಪ್ರಕಾಶ್, ಹಕ್ಕಯ್ ಅಕ್ಷಯ್ ಮಚ್ಚೀಂದ್ರ, ಪದ್ಮಿನಿ ಸಾಹೂ, ಕ್ಷಮಾ ಮಿಶ್ರಾ, ಸಾಹಿಲ್ ಬಾಗ್ಲಾ ಹಾಗೂ ಮಂಗಳೂರು ನಗರದ ಮಿಥುನ್ ಹೆಚ್.ಎನ್. ಸೇರಿದಂತೆ ಹಲವರು ಪಟ್ಟಿಯಲ್ಲಿದ್ದಾರೆ.

ಅದೇ ರೀತಿ ವಿವಿಧ ಜಿಲ್ಲೆಗಳು, ನಗರ ಪೊಲೀಸ್ ಆಯುಕ್ತಾಲಯಗಳು, ಸಿಐಡಿ, ರಾಜ್ಯ ಗುಪ್ತದಳ, ಸಂಚಾರ ವಿಭಾಗ, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್ ಹಾಗೂ ಇತರೆ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಿವೈಎಸ್ಪಿ, ಎಸಿಪಿ, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಎಎಸ್‌ಐ, ಹೆಡ್ ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್ ಹುದ್ದೆಯ ನೂರಾರು ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಪ್ರಶಂಸನಾ ಪದಕ ನೀಡಲಾಗಿದೆ.

ಕರ್ತವ್ಯನಿಷ್ಠೆ, ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ವಿಶೇಷ ಕೊಡುಗೆ ಹಾಗೂ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ ಅತ್ಯುನ್ನತ ಆಂತರಿಕ ಗೌರವಗಳಲ್ಲಿ ಒಂದಾದ ಈ ಪ್ರಶಂಸನಾ ಪದಕವು ಸಿಬ್ಬಂದಿಯ ಕಾರ್ಯಕ್ಷಮತೆಗೆ ಮತ್ತಷ್ಟು ಉತ್ತೇಜನ ನೀಡಲಿದೆ.

Related News

error: Content is protected !!